ಪಂಜಾಬ್ ಮಾಜಿ ಸಿಎಂ ವಿರುದ್ಧ ಲುಕೌಟ್ ನೋಟಿಸ್!

ಚಂಡೀಗಢ: ಪಂಜಾಬ್ ವಿಚಕ್ಷಣಾ ದಳ ರಾಜ್ಯದ ಮಾಜಿ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ವಿರುದ್ಧ ಲುಕೌಟ್ ನೋಟಿಸ್ ನೀಡಿದೆ. ಚನ್ನಿ ವಿರುದ್ಧ ಅದಾಯದ ಮೂಲಕ್ಕಿಂತ ಅಧಿಕ ಸಂಪತ್ತು ಕ್ರೋಢೀಕರಿಸಿದ ಆರೋಪದ ಬಗ್ಗೆ ವಿಚಾರಣೆ ನಡೆಸುತ್ತಿರುವ ತನಿಖಾ ಸಂಸ್ಥೆ ಈ ನೋಟಿಸ್ ನೀಡಿದೆ.
ಲುಕೌಟ್ ನೋಟಿಸ್ ನೀಡಿರುವ ಕ್ರಮವನ್ನು ದೃಢಪಡಿಸಿರುವ ವಿಚಕ್ಷಣಾ ವಕ್ತಾರರು, "ಮಾಜಿ ಸಿಎಂ ಚನ್ನಿ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿದ್ದು, ದೇಶದಿಂದ ಅವರು ಹೊರ ಹೋಗುವಂತಿಲ್ಲ. ತನಿಖೆಗೆ ಹಾಜರಾಗಲು ಅವರಿಗೆ ಶೀಘ್ರವೇ ಸಮನ್ಸ್ ನೀಡಲಾಗುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕ ಸಂಪತ್ತು ಕ್ರೋಢೀಕರಿಸಿದ ಪ್ರಕರಣದಲ್ಲಿ ಚನ್ನಿ ವಿರುದ್ಧ ನಿಗಾ ಇಡಲಾಗಿದೆ ಎಂದು ಮುಖ್ಯಮಂತ್ರಿ ಭಗವಾನ್ ಸಿಂಗ್ ಮಾನ್ ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದ್ದರು.
ಚನ್ನಿ ಮಾತ್ರವಲ್ಲದೇ ಅವರ ಕುಟುಂಬ ಸದಸ್ಯರು, ಸಹೋದರರು ಹಾಗೂ ಅವರ ಕೆಲ ಸಹಚರರ ವಿರುದ್ಧವೂ ತನಿಖೆ ನಡೆಯುತ್ತಿದೆ. ವಿಚಕ್ಷಣಾ ಬ್ಯೂರೊ ಕಳೆದ ಆರು ತಿಂಗಳಿಂದ ಪ್ರಾಥಮಿಕ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ, "ಚನ್ನಿ ಅಕ್ರಮವಾಗಿ ಕೆಲ ಗುತ್ತಿಗೆದಾರರು ಹಾಗೂ ಸಹಚರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆಪಾದಿಸಲಾಗಿದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಮಾಡಿದ ದೊಡ್ಡ ಪ್ರಮಾಣದ ವರ್ಗಾವಣೆಗಳು/ ನೀತಿ ನಿರ್ಣಯಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ" ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಚನ್ನಿ ವಿದೇಶಕ್ಕೆ ಹೊರಡಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮಾರ್ಚ್ 7ರಂದು ಲುಕೌಟ್ ನೋಟಿಸ್ ಹೊರಡಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
"ಯಾವುದೇ ತನಿಖೆಗೆ ನಾನು ಸಿದ್ಧ. ನನ್ನ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಮಾನ್ ಹೇಳಿದ ತಕ್ಷಣ ಬಹಿರಂಗವಾಗಿಯೇ ನಾನು ವಿದೇಶಕ್ಕೆ ಹೋಗುವುದಿಲ್ಲ ಎಂದು ಪ್ರಕಟಿಸಿದ್ದೆ. ಸ್ವಯಂಪ್ರೇರಿತವಾಗಿ ಟಿಕೆಟ್ ರದ್ದು ಮಾಡಿದ್ದೆ. ನನ್ನ ಮಾನಹಾನಿ ಮಾಡುವ ಸಲುವಾಗಿ ಆ್ಯಪ್ ಸರ್ಕಾರ ಉದ್ದೇಶಪೂರ್ವಕವಾಗಿ ಲುಕೌಟ್ ನೊಟಿಸ್ ನೀಡಿದೆ" ಎಂದು ಚನ್ನಿ ಪ್ರತಿಕ್ರಿಯಿಸಿದ್ದಾರೆ.







