ಹೋಳಿ ಹಬ್ಬದಂದು ಕಿರುಕುಳ: ಭಾರತ ತೊರೆದ ಜಪಾನ್ ಯುವತಿ
ಹೊಸದಿಲ್ಲಿ: ಹೋಳಿ (Holi) ಹಬ್ಬದಂದು ಪುಂಡರಿಂದ ಕಿರುಕುಳ ಅನುಭವಿಸಿದ್ದ ಜಪಾನ್ (Japan) ಯುವತಿಯು ಶುಕ್ರವಾರ ಬಾಂಗ್ಲಾದೇಶಕ್ಕೆ ತೆರಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಹೋಳಿ ಹಬ್ಬದಂದು ಜಪಾನ್ ಯುವತಿಗೆ ಕಿರುಕುಳ ನೀಡಿ, ಅನುಚಿತ ವರ್ತನೆ ತೋರಿದ ಆರೋಪದಲ್ಲಿ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ಓರ್ವ ಅಪ್ರಾಪ್ತ ಯುವಕನಾಗಿದ್ದಾನೆ. ಯುವ ಪ್ರವಾಸಿ ತರುಣಿಯು ಕೇಂದ್ರ ದಿಲ್ಲಿಯ ಪಹರ್ಗಂಜ್ನಲ್ಲಿ ಉಳಿದುಕೊಂಡಿದ್ದಳು ಹಾಗೂ ಅಪ್ರಾಪ್ತ ಯುವಕನೂ ಅದೇ ಪ್ರದೇಶದವನಾಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸರು, "ಪ್ರವಾಸಿ ತರುಣಿಯು ಘಟನೆಯ ಸಂಬಂಧ ಯಾವುದೇ ದೂರನ್ನು ದಾಖಲಿಸಿಲ್ಲ. ತರುಣಿಯು ಟ್ವೀಟ್ ಮಾಡಿ, ನಾನೀಗ ಬಾಂಗ್ಲಾದೇಶ ತಲುಪಿದ್ದು, ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾಳೆ" ಎಂದು ಹೇಳಿದ್ದಾರೆ.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಭಾರಿ ಆಕ್ರೋಶ ವ್ಯಕ್ತವಾಗಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಆ ವಿಡಿಯೊದಲ್ಲಿ ಪುಂಡರ ಗುಂಪೊಂದು ಆ ಯುವತಿಯನ್ನು ಬಲವಂತವಾಗಿ ಎಳೆದುಕೊಂಡು, "ಹೋಳಿ ಇದೆ" ಎಂಬ ಘೋಷಣೆ ಕೂಗುತ್ತಾ, ಆಕೆಗೆ ಬಣ್ಣ ಬಳಿಯುತ್ತಿರುವುದು ಸೆರೆಯಾಗಿತ್ತು. ಅಲ್ಲದೆ, ಓರ್ವ ಬಾಲಕ ಆಕೆಯ ತಲೆಯ ಮೇಲೆ ಮೊಟ್ಟೆ ಒಡೆಯುತ್ತಿರುವ ದೃಶ್ಯ ಕೂಡಾ ದಾಖಲಾಗಿತ್ತು.
ಆಕೆಯನ್ನು ಹಿಡಿದುಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬನ ಕೆನ್ನೆಗೆ ಬಾರಿಸಿದ ಆ ಯುವತಿಯು ಅವರ ಹಿಡಿತದಿಂದ ತಪ್ಪಿಸಿಕೊಂಡು ಹೋಗುವ ದೃಶ್ಯವೂ ಆ ವಿಡಿಯೊದಲ್ಲಿ ಸೆರೆಯಾಗಿತ್ತು. ಆ ಘಟನೆ ಮುಗಿಯುವ ವೇಳೆಗೆ ಆಕೆ ಸಂಪೂರ್ಣವಾಗಿ ಬಣ್ಣದಲ್ಲಿ ತೊಯ್ದು ಹೋಗಿ, ಗುರುತು ಸಿಗದಂತಾಗಿದ್ದಳು.
ಸ್ಥಳೀಯ ಗುಪ್ತಚರರ ನೆರವಿನಿಂದ ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿರುವ ಪೊಲೀಸರು, ನಾವು ಜಪಾನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಮದ್ಯವ್ಯಸನಿಯಿಂದ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ