95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಂಪು ಹಾಸಿನ ಸ್ವಾಗತವಿರುವುದಿಲ್ಲ; ಕಾರಣವೇನು ಗೊತ್ತೆ?
ಲಾಸ್ ಏಂಜಲೀಸ್: ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ (Oscars 2023) ಪ್ರದಾನ ಸಮಾರಂಭ ನಡೆಯಲಿದ್ದು, ಅಂದು ಹಲವಾರು ಜನಪ್ರಿಯ ಜಾಗತಿಕ ತಾರೆಯರ ಉಪಸ್ಥಿತಿಗೆ ಸಾಕ್ಷಿಯಾಗಲಿದೆ. ಪ್ರತಿ ವರ್ಷ ನಡೆಯುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಮೆಚ್ಚಿನ ಉಡುಗೆ-ತೊಡುಗೆಯೊಂದಿಗೆ ಹಾಜರಾಗುವ ತಾರೆಯರಿಗೆ ನೀಡುವ ಕೆಂಪು ಹಾಸಿನ (red carpet) ಸ್ವಾಗತವೇ ಪ್ರಮುಖ ಆಕರ್ಷಣೆಯಾಗಿರುತ್ತದೆ. ಆದರೆ, ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಇತಿಹಾಸದಲ್ಲೇ ಮೊದಲ ಬಾರಿಗೆ ಯಾರಿಗೂ ಕೆಂಪು ಹಾಸಿನ ಸ್ವಾಗತ ನೀಡಲಾಗುತ್ತಿಲ್ಲ ಎಂದು ವರದಿಯಾಗಿದೆ.
1961ರ ನಂತರ ಇದೇ ಪ್ರಥಮ ಬಾರಿಗೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಂಪು ಹಾಸಿನ ಸ್ವಾಗತ ನೀಡಲಾಗುತ್ತಿಲ್ಲ. ಆದರೆ ತಾರೆಯರಿಗೆ ಈ ಬಾರಿಯ ಸಮಾರಂಭದಲ್ಲಿ ಕೆಂಪು ಹಾಸಿನ ಸ್ವಾಗತದ ಬದಲು ಶಾಂಪೇನ್ ಬಣ್ಣದ ಹಾಸಿನ ಸ್ವಾಗತ ನೀಡಲಾಗುತ್ತದೆ.
ಈ ಕುರಿತು ತಮಾಷೆ ಮಾಡಿರುವ 2023ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಕ ಜಿಮ್ಮಿ ಕಿಮ್ಮೆಲ್, "ನನಗನ್ನಿಸುವಂತೆ, ಕೆಂಪು ಹಾಸಿನ ಬದಲು ಶಾಂಪೇನ್ ಬಣ್ಣದ ಹಾಸಿಗೆ ಬದಲಾಯಿಸಿರುವುದರಿಂದ ನಾನು ಯಾವುದೇ ರಕ್ತಪಾತ ನಡೆಯುವುದಿಲ್ಲ ಎಂಬ ಬಗ್ಗೆ ಎಷ್ಟು ಆತ್ಮವಿಶ್ವಾಸ ಹೊಂದಿದ್ದೇವೆ ಎಂಬುದನ್ನು ಸೂಚಿಸುತ್ತಿದೆ" ಎಂದು ಚಟಾಕಿ ಹಾರಿಸಿದ್ದಾರೆ. ಆದರೆ, ಇದು ಸತ್ಯವಲ್ಲ.
ಸೃಜನಾತ್ಮಕ ಸಮಾಲೋಚಕರಾದ ಲೀಸಾ ಲವ್ ಹಾಗೂ ರೌಲ್ ಅವಿಲಾ ಅವರ ಸಲಹೆಯ ಮೇರೆಗೆ ಕೆಂಪು ಹಾಸಿನಿಂದ ಶಾಂಪೇನ್ ಬಣ್ಣದ ಹಾಸಿಗೆ ಬದಲಾವಣೆ ಮಾಡಲಾಗಿದೆ. ಇದಲ್ಲದೆ ಸೂರ್ಯೋದಯವನ್ನು ಪ್ರತಿನಿಧಿಸಲು ಕೇಸರಿ ಹಾಗೂ ಸಿಯೆನ್ನಾ ಬಣ್ಣವನ್ನೂ ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ, ಕೊನೆಗೆ ಶಾಂಪೇನ್ ಬಣ್ಣದ ಹಾಸನ್ನೇ ಅಂತಿಮಗೊಳಿಸಲಾಗಿದೆ.
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿರುವ ಡಾಲ್ಬಿ ಚಿತ್ರಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹರಿಯಲಿರುವ ಶಾಂಪೇನ್‌ಗೆ ಈ ಹಾಸು ಸಾಂಕೇತಿಕವಾಗಿದೆ ಎಂದೂ ಹೇಳಲಾಗಿದೆ. ಮಾರ್ಚ್ 12ರಂದು ಲಾಸ್ ಏಂಜಲೀಸ್‌ನ ಹಾಲಿವುಡ್‌ನಲ್ಲಿರುವ ಪ್ರಸಿದ್ಧ ಡಾಲ್ಬಿ ಚಿತ್ರಮಂದಿರದಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಇದನ್ನೂ ಓದಿ: ಹೋಳಿ ಹಬ್ಬದಂದು ಕಿರುಕುಳ: ಭಾರತ ತೊರೆದ ಜಪಾನ್ ಯುವತಿ