ಹೈದರಾಬಾದ್: ರೈಡ್ ಡಿಟರ್ಜಂಟ್ ಪೋಸ್ಟರ್ ಹಾಕಿ ಬಿಜೆಪಿಯನ್ನು ಅಣಕಿಸಿದ ಬಿಆರ್ ಎಸ್

ಹೈದರಾಬಾದ್: ದಿಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ, ಬಿಆರ್ ಎಸ್ ಎಂಎಲ್ ಸಿ ಕೆ.ಕವಿತಾ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಹಾಕಿರುವ ರೈಡ್ ಡಿಟರ್ಜಂಟ್ ಪೋಸ್ಟರ್ ಗಳು ಎಲ್ಲರ ಗಮನ ಸೆಳೆದಿದೆ.
ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ನಾಯಕರು ಈಗ ಯಾವುದೇ ಸಂಸ್ಥೆಯ ತನಿಖೆ ಎದುರಿಸುತ್ತಿಲ್ಲ ಎಂಬರ್ಥದ ಪೋಸ್ಟರ್ ಗಳನ್ನು ಹಾಕಲಾಗಿದೆ. ಕೊಳಕಾಗಿದ್ದ ನಾಯಕರ ಶರ್ಟ್ ಡಿಟರ್ಜಂಟ್ ಹಾಕಿದ ತಕ್ಷಣ ಸ್ವಚ್ಛವಾಗುತ್ತದೆ ಎಂದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ.
'#ಬೈ ಬೈ ಮೋದಿ' ಜೊತೆಗೆ ಕೇಸರಿ ಪಕ್ಷವನ್ನು "ರೈಡ್ ಡಿಟರ್ಜೆಂಟ್" ಎಂದು ಲೇವಡಿ ಮಾಡುವ ಪೋಸ್ಟರ್‌ಗಳು ಕಂಡುಬಂದವು.
ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡ ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ ಹಾಗೂ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಚಿತ್ರದ ಜೊತೆಗೆ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರನ್ನು ಒಳಗೊಂಡ ಪೋಸ್ಟರ್‌ಗಳು ಹೈದರಾಬಾದ್‌ನಲ್ಲಿ ಕಂಡುಬಂದವು. ಕವಿತಾ ಅವರ ಚಿತ್ರದೊಂದಿಗೆ ಬಣ್ಣ ಯಾವತ್ತೂ ಮಸುಕಾಗುವುದಿಲ್ಲ ಎಂದು ಬರೆಯಲಾಗಿದೆ.
ಸಂಸತ್ತಿನ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸುವಂತೆ ಒತ್ತಾಯಿಸಿ ಶುಕ್ರವಾರದಂದು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಕವಿತಾ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು.
ಕವಿತಾ ಶುಕ್ರವಾರ ದಿಲ್ಲಿಯಲ್ಲಿ ತನ್ನ ಉಪವಾಸ ಸತ್ಯಾಗ್ರಹವನ್ನು ಉಲ್ಲೇಖಿಸಿ ತನ್ನ ವಿಚಾರಣೆಯನ್ನು ಶನಿವಾರದವರೆಗೆ ಮುಂದೂಡುವಂತೆ ತನಿಖಾ ಸಂಸ್ಥೆಯನ್ನು ಕೇಳಿದ್ದರು.
ಇದೇ ಪ್ರಕರಣದಲ್ಲಿ ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಈಡಿ ಬಂಧಿಸಿರುವುದು ಗಮನಾರ್ಹ.
Telangana | Posters, featuring leaders who joined BJP from others parties and BRS MLC K Kavitha on the other hand, seen in Hyderabad. She is scheduled to appear before ED today in Delhi, in connection with the liquor policy case. pic.twitter.com/bgu7oOL6R1
— ANI (@ANI) March 11, 2023







