ರೇಷ್ಮೆ ಗೂಡಿನ ಬೆಲೆ ದಿಢೀರ್ ಕುಸಿತದಿಂದ ಬೆಳೆಗಾರರಿಗೆ ಆತಂಕ ಬೇಡ: ಸಚಿವ ಡಾ.ನಾರಾಯಣಗೌಡ ಭರವಸೆ

ಬೆಂಗಳೂರು: ಕಚ್ಚಾ ರೇಷ್ಮೆ ಬೆಲೆ ದಿಢೀರ್ ಕುಸಿತದಿಂದ ರೇಷ್ಮೆ ಬೆಳೆಗಾರರು ಆತಂಕಗೊಳ್ಳಬಾರದು. ಶೀಘ್ರವೇ ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಭರವಸೆ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸ್ಥಿರವಾಗಿದ್ದ ರೇಷ್ಮೆಗೂಡಿನ ದರ ದಿಢೀರ್ ಕುಸಿತಗೊಂಡಿದ್ದು, ಇದರಿಂದ ರೇಷ್ಮೆ ಬೆಳೆಗಾರರು ಆತಂಕಪಡುವ ಅವಶ್ಯಕತೆ ಇಲ್ಲ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶ ಮಾಡಲಿದೆ. ಕಚ್ಚಾ ರೇಷ್ಮೆ ಬೆಲೆ ದಿಢೀರ್ ಕುಸಿತ ತಾತ್ಕಾಲಿಕ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಲೂ ಬೆಲೆ ಕಡಿಮೆಯಾಗಿರಬಹುದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ವತಿಯಿಂದ ಕಚ್ಚಾ ರೇಷ್ಮೆ ಖರೀದಿ ಮಾಡಲು ತುರ್ತಾಗಿ ಕ್ರಮವಹಿಸಲಾಗುವುದು. ಆದ್ದರಿಂದ ರೇಷ್ಮೆ ಬೆಳೆಗಾರರು ಆತಂಕಪಡಬೇಕಿಲ್ಲ. ಸರ್ಕಾರ ಸದಾ ಕಾಲ ರೇಷ್ಮೆ ಬೆಳೆಗಾರರ ಪರವಾಗಿದೆ. ಮತ್ತೆ ರೇಷ್ಮೆಗೂಡಿನ ಬೆಲೆ ಉತ್ತಮ ಸ್ಥಿತಿಗೆ ತಲುಪಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





