ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆ ನಿರಂತರ: ಶಶಿಕಲಾ ಚಂದ್ರಶೇಖರ್

ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ವತಿಯಿಂದ ಅಮೆರಿಕಾ ಕನ್ನಡ ಸಾಹಿತ್ಯ ರಂಗ ಸಂಸ್ಥೆಯ ಶಶಿಕಲಾ ಚಂದ್ರಶೇಖರ್ ಅವರೊಂದಿಗೆ ಮಾತುಕತೆ ಕಾರ್ಯಕ್ರಮವು ಉಡುಪಿಯ ಕೊಡವೂರಿನ ಭಾಮ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು.
ಶಶಿಕಲಾ ಚಂದ್ರಶೇಖರ್ ಮಾತನಾಡಿ, ಕಲೆ, ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯದ ಕುರಿತು ಹಲವು ಕಾರ್ಯಕ್ರಮಗಳು ನಿರಂತರವಾಗಿ ಅಮೆರಿಕದಲ್ಲಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕನ್ನಡ ಸಾಹಿತ್ಯ ಚಟುವಟಿಕೆ ಗಳು ನಿರಂತರವಾಗಿ ನಡೆಯುತ್ತಿದೆ ಎಂದರು.
ಸಾಹಿತಿ ವೈದೇಹಿ ತಾವು ಅಮೆರಿಕಕ್ಕೆ ಹೋದ ಸಂದರ್ಭದಲ್ಲಿ ಸಾಹಿತ್ಯ ಕಾರ್ಯಕ್ರಮದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಕವಯಿತ್ರಿ ಜ್ಯೋತಿ ಮಹದೇವ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಾಹಿತಿ ಶಶಿಕಲಾ ಚಂದ್ರಶೇಖರ್‌ರನ್ನು ಕಸಾಪ ವತಿಯಿಂದ ಗೌರವಿಸಿ, ಅಭಿನಂದಿಸ ಲಾಯಿತು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶ್ರೀನಿವಾಸ್ ಮೂರ್ತಿ, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಪೂರ್ಣಿಮಾ ಜನಾರ್ದನ್, ಪೂರ್ಣಿಮಾ ಸುರೇಶ್ ನಾರಾಯಣ ಮಡಿ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ನರಸಿಂಹಮೂರ್ತಿ, ಸತೀಶ್ ಕೊಡವೂರು, ಈರಣ್ಣ ಕುರುವತ್ತಿ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು.