ನ್ಯಾ. ಸದಾಶಿವ ಮತ್ತು ಕಾಂತರಾಜ್ ವರದಿ ಬಹಿರಂಗ ಪಡಿಸಲು ಪರಿಶಿಷ್ಟರ ಮಹಾ ಒಕ್ಕೂಟ ಆಗ್ರಹ
ಮಂಗಳೂರು : ನ್ಯಾ.ಎ.ಜೆ. ಸದಾಶಿವ ಆಯೋಗ ಮತ್ತು ಎಚ್. ಕಾಂತರಾಜ್ ನೇತೃತ್ವದ ಆಯೋಗದ ವರದಿ ಬಗ್ಗೆ ಸಾರ್ವಜನಿಕ ಚರ್ಚೆಯಾದ ಬಳಿಕ ರಾಜ್ಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಆಯೋಗ ನಿಯಮಾನುಸಾರ ವರದಿಗಳ ಬಗ್ಗೆ ಜಿಲ್ಲೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ/ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಒತ್ತಾಯಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಈ ಬಗ್ಗೆ ರಾಜ್ಯದ ಆಡಳಿತ ಪಕ್ಷವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್‌ಗೆ ಮನವಿ ಸಲ್ಲಿಸಲಾಗುವುದು. ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ ಬಳಿಕ ಈ ಮೂರು ವರದಿಗಳನ್ನು ಒಳ ಮೀಸಲಾತಿಗೆ ಸಂಬಂಧಿಸಿ ಈಗ ರಚನೆಯಾಗಿರುವ ಸಚಿವ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯು ಸಮಗ್ರವಾಗಿ ಪರಿಶೀಲಿಸಿ ಸರಕಾರಕ್ಕೆ ಸೂಕ್ತ ಶಿಫಾರಸ್ಸು ನೀಡುವಂತೆ ನಳಿನ್ ಕುಮಾರ್ ಕಟೀಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
2005ರಲ್ಲಿ ರಚನೆಯಾಗಿದ್ದ ನ್ಯಾ. ಸದಾಶಿವ ಆಯೋಗ 2012ರಲ್ಲಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಿತ್ತು. 2015ರಲ್ಲಿ ಎಚ್. ಕಾಂತರಾಜ್ ಅಧ್ಯಕ್ಷತೆಯಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಎಲ್ಲಾ ಜನ ಸಮುದಾಯಗಳ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕುರಿತು ಸಮೀಕ್ಷೆ ಹಾಗೂ ಅಧ್ಯಯನ ನಡೆಸಿದೆ. ಎರಡೂ ವರದಿಗಾಗಿ ಜನರ ತೆರಿಗೆ ಕೋಟ್ಯಂತರ ರೂ.ವ್ಯಯಿಸಲಾಗಿದೆ. ಈ ವರದಿಗಳನ್ನು ರಾಜ್ಯದ ಶಾಸನ ಸಭೆಯಲ್ಲಿ ಮಂಡಿಸಿ, ಸಾರ್ವಜನಿಕ ಸಮಾಲೋಚನೆಗೆ ಅವಕಾಶ ಕಲ್ಪಿಸಬೇಕಿತ್ತು. ಆದರೆ ಸರಕಾರ ಆ ಕೆಲಸವನ್ನು ಮಾಡಿಲ್ಲ. ಇದರಿಂದ ಆಯೋಗಗಳು ನೀಡಿರುವ ವರದಿಗಳ ಬಗ್ಗೆ ಕಪೋಲಕಲ್ಪಿತ ವಿಮರ್ಶೆ, ವಿಶ್ಲೇಷಣೆ ನಡೆಯುವುದಕ್ಕೆ ಆಸ್ಪದವಾಗಿದೆ. ಅನಧಿಕೃತವಾಗಿ ಬಹಿರಂಗಗೊಂಡಿರುವ ನ್ಯಾ. ಸದಾಶಿವ ವರದಿ ಜಾರಿಗೆ ಬಂದರೆ ದ.ಕ. ಮತ್ತು ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿಗಳ ಜನರಿಗೆ ಕೇವಲ ಶೇ.1ರಷ್ಟು ಕೂಡ ಮೀಸಲಾತಿ ಸಿಗುವುದು ಅನುಮಾನ ಎಂದು ಲೋಲಾಕ್ಷ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಪದ್ಮನಾಭ ನರಿಂಗಾನ, ಮೋಹನಾಂಗಯ್ಯ ಸ್ವಾಮಿ, ಶಿವಾನಂದ ಬಲ್ಲಾಳ್‌ಬಾಗ್, ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ವಿವಿಧ ಸಮುದಾಯ ಸಂಘಟನೆಗಳ ಮುಖಂಡರಾದ ಸೀತಾರಾಮ್, ಎಂ.ಡಿ. ವೆಂಕಪ್ಪ, ಸುಂದರ ಮೇರ, ಬಾಲಕೃಷ್ಣ ಉಪಸ್ಥಿತರಿದ್ದರು.