ಆಮಿಷಗಳ ತಡೆಗೆ ‘ಚುನಾವಣಾ ಮುಹೂರ್ತ’ಕ್ಕೆ ಕಾಯದೇ ತಕ್ಷಣದಿಂದಲೇ ಕ್ರಮ ವಹಿಸಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

ಬೆಂಗಳೂರು, ಮಾ. 11: ‘ವಿಧಾನಸಭಾ ‘ಚುನಾವಣಾ ಮುಹೂರ್ತ’ಕ್ಕಾಗಿ ನಿರೀಕ್ಷಿಸದೆ ರಾಜ್ಯದಲ್ಲಿ ಮತದಾರರಿಗೆ ಹಣ, ಉಡುಗೊರೆಗಳ ಆಮಿಷ ಒಡ್ಡುತ್ತಿರುವ ಪ್ರಕರಣಗಳು ಕಂಡುಬಂದರೆ ತಕ್ಷಣದಿಂದಲೇ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗವು ಮುಂದಾಗಬೇಕು’ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇಂದಿಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಕರ್ನಾಟಕ ರಾಜ್ಯದಲ್ಲಿ ಚುನಾವಣೆಯಲ್ಲಿ ಹಣದ ಬಳಕೆ ಮತ್ತು ಆಮಿಷಗಳನ್ನು ತಡೆಯುವುದು ದೊಡ್ಡ ಸವಾಲಾಗಿದೆ. ಮತದಾರರಿಗೆ ಆಮಿಷವೊಡ್ಡುವ ಪ್ರಕರಣಗಳನ್ನು ತಡೆಗಟ್ಟಲು ಚುನಾವಣಾ ಮಾದರಿ ನೀತಿಸಂಹಿತೆ ಜಾರಿಯಾಗುವವರೆಗೂ ಕಾಯುವ ಅಗತ್ಯವಿಲ್ಲ. ಯಾವುದೇ ರೀತಿಯ ಅಮಿಷ ಒಡ್ಡುವ ಪ್ರಕರಣಗಳಿದ್ದರೂ ಕೂಡಲೇ ಕ್ರಮ ಜರುಗಿಸಲು ಅಧಿಕಾರವನ್ನು ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಹಣಕಾಸು ವಹಿವಾಟಿನ ಮೇಲೆ ಕಟ್ಟೆಚ್ಚರ: ಚುನಾವಣೆ ಸಂದರ್ಭದಲ್ಲಿ ಹಣ ಪ್ರಭಾವವನ್ನು ಬಳಸಿ ನಡೆಸಲಾಗುವ ಚುನಾವಣಾ ಅಕ್ರಮವನ್ನು ತಪ್ಪಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಹಣದ ಸಾಗಣೆ ಮೇಲೆ ನಿಗಾ ಇರಿಸಲಾಗುವುದು. ಬ್ಯಾಂಕ್ ಮತ್ತು ಎಟಿಎಂಗಳಿಗೆ ಹಣ ಸಾಗಿಸುವ ವಾಹನಗಳು ಸಂಜೆ ಐದು ಗಂಟೆಯ ನಂತರ ಸಂಚರಿಸುವಂತಿಲ್ಲ. ದೊಡ್ಡ ಮೊತ್ತದ ಹಣ ಸೆಳೆಯುವ(ಡ್ರಾ)ವರ ಮೇಲೆ ನಿಗಾ ಇರಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
‘ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷದ ಜೊತೆಗೆ ಕುಕ್ಕರ್ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ವಿತರಣೆ ಮಾಡುತ್ತಿರುವುದು ಗೊತ್ತಾಗಿದ್ದು, ಗೃಹೋಪಯೋಗಿ ವಸ್ತುಗಳ ಸಗಟು ಖರೀದಿ, ದಾಸ್ತಾನು ಮಾಡುವವರ ಮೇಲೆಯೂ ಹದ್ದಿನಕಣ್ಣಿರಿಸಲು ಸೂಚನೆ ನೀಡಲಾಗಿದೆ’ ಎಂದ ರಾಜೀವ್ ಕುಮಾರ್, ಹಲವು ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿದ್ದು, ‘ಸಿ ವಿಜಿಲ್’ ಆಪ್ ಮೂಲಕ ಜನ ಸಾಮಾನ್ಯರು ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದು ಎಂದು ಹೇಳಿದರು.
‘ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲಾಗಿದ್ದು, ಎಷ್ಟು ಹಂತದಲ್ಲಿ ಚುನಾವಣೆ ನಡೆಸಬೇಕು ಮತ್ತು ಯಾವ ದಿನಾಂಕದಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು ಎಂಬುದನ್ನು ಹೊಸದಿಲ್ಲಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ತೀರ್ಮಾನಿಸಲಾಗುವುದು’ ಎಂದು ರಾಜೀವ್ ಕುಮಾರ್ ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಯಾವುದೇ ಅಧಿಕಾರಿಗಳು ಪಕ್ಷಪಾತ ಮಾಡುತ್ತಿರುವ ದೂರು ಬಂದರೆ ಪರಿಶೀಲಿಸಿ, ತಕ್ಷಣವೇ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ ಅವರು, ಚುನಾವಣಾ ಆಯೋಗದ ವತಿಯಿಂದ ಸುವಿಧಾ ವೆಬ್‍ಸೈಟ್ ಮತ್ತು ಸಕ್ಷಮ್ ಆಪ್ ರಚಿಸಲಾಗಿದ್ದು ಮತದಾರರು ಹಾಗೂ ರಾಜಕೀಯ ಪಕ್ಷಗಳು ತಮ್ಮ ಹಲವಾರು ಅಗತ್ಯತೆಗಳಿಗೆ ಇವುಗಳನ್ನು ಬಳಸಿಕೊಳ್ಳಬಹುದು ಎಂದು ಹೇಳಿದರು.
‘ಎಲೆಕ್ಯಾಥಾನ್-2023 ಹ್ಯಾಕಥಾನ್ ಅನ್ನು ಪ್ರಾರಂಭಿಸಿದ್ದು, ಹೊಸ ಮತದಾರರನ್ನ ಪಟ್ಟಿಗೆ ಸೇರಿಸುವುದು ಹಾಗೂ ಮತದಾನದ ಬಗ್ಗೆ ನಗರ ಪ್ರದೇಶ ಹಾಗೂ ಯುವ ಜನರಲ್ಲಿ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ನೂತನ ಕ್ರಮಗಳನ್ನು ಗುರುತಿಸುವ ಪ್ರಮುಖ ಉದ್ದೇಶದಿಂದ ಈ ಹ್ಯಾಕಥಾನ್ ಎಲೆಕ್ಯಾಥಾನ್-2023 ಆಯೋಜಿಸಲಾಗಿದೆ. ಮೂರು ಹಂತಗಳಲ್ಲಿ 30 ದಿನಗಳ ಕಾಲ ನಡೆಯಲಿರುವ ಈ ಹ್ಯಾಕಥಾನ್‍ನಲ್ಲಿ ಜನರು ಭಾಗವಹಿಸಿ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದು ರಾಜೀವ್ ಕುಮಾರ್ ಕರೆ ನೀಡಿದರು.
'ಮತದಾರರ ನಿರಾಸಕ್ತಿಯ ಸವಾಲು':
‘ನಗರ ಮತದಾರರ ನಿರಾಸಕ್ತಿ ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿದೆ. ಇದನ್ನ 2013ರಲ್ಲಿ ನಡೆದ ಮತದಾನಕ್ಕಿಂತಲೂ ಕಡಿಮೆ ಮತದಾನ 2018ರ ಚುನಾವಣೆಯಲ್ಲಿ ಕಾಣಬಹುದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡಿಮೆ ಮತದಾನ ಕಂಡುಬಂದಿದ್ದು, ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಮತದಾರರ ‘ಪ್ರಜಾಪ್ರಭುತ್ವದ ಹಬ್ಬ’ವನ್ನು ಆಚರಿಸುವಲ್ಲಿ ಉತ್ತೇಜಿಸುವುದು ನಮ್ಮ ಪ್ರಮುಖ ಗುರಿ. ವಿಶ್ವ ಮತ್ತು ದೇಶದ ಐಟಿ ಹಬ್ ಆಗಿರುವ ಬೆಂಗಳೂರು ಬೇರೆ ರಾಜ್ಯಗಳಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ’
- ರಾಜೀವ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತ ಕೇಂದ್ರ ಚುನಾವಣಾ ಆಯೋಗ






.jpg)
.jpg)
.jpg)

