ಒತ್ತಡ ನಿವಾರಿಸುವಲ್ಲಿ ಕ್ರೀಡೆಗಳು ಸಹಕಾರಿ: ಮಂಜುನಾಥ್ ಭಂಡಾರಿ

ಮಂಗಳೂರು, ಮಾ.11: ದಿನದ 24 ತಾಸು ಒತ್ತಡದಲ್ಲಿ ಕೆಲಸ ಮಾಡುವ ಸರಕಾರಿ ನೌಕರರು ಅದರಲ್ಲೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಒತ್ತಡ ಕಡಿಮೆ ಮಾಡಿ ಅವರಲ್ಲಿ ಉತ್ಸಾಹ ತುಂಬಲು ಕ್ರೀಡಾಕೂಟಗಳು ಬಹಳ ಉಪಯುಕ್ತ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅಭಿಪ್ರಾಯಪಟ್ಟರು.
ದ.ಕ.ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಿಬ್ಬಂದಿ ವರ್ಗಕ್ಕೆ ನಗರದ ಮಂಗಳ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅವಿಭಜಿತ ದ.ಕ.ಜಿಲ್ಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಆಯೋಜಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಸೂಕ್ತ ರೂಪುರೇಷೆಗಳನ್ನು ನೀಡಿ ಮುಂದಿನ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಂಜುನಾಥ್ ಭಂಡಾರಿ ಹೇಳಿದರು.
ಮುಖ್ಯ ಅತಿಥಿಯಾಗಿ ದ.ಕ.ಜಿಪಂ ಸಿಇಒ ಡಾ. ಕುಮಾರ್, ಶಾಸಕ ಯು.ಟಿ. ಖಾದರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ತಾಪಂ ಇಒ ಭವಾನಿ ಶಂಕರ್, ಮೂಡುಬಿದಿರೆ ತಾಪಂ ಇಒ ದಯಾವತಿ, ಬೆಳ್ತಂಗಡಿ ತಾಪಂ ಇಒ ಕುಸುಮಾಧರ ಹಾಗೂ ವೈದ್ಯ ಡಾ. ಕಿರಣ ಉಪಸ್ಥಿತರಿದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ. ನಾಯಕ್ ಸ್ವಾಗತಿಸಿದರು.
ಕ್ರೀಡಾಕೂಟದಲ್ಲಿ ಗುಂಪು ಹಾಗೂ ವೈಯಕ್ತಿಕ ವಿಭಾಗದಲ್ಲಿ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಗುಂಪು ಕ್ರೀಡೆಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ವಾಲಿಬಾಲ್, ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟ, ವೈಯಕ್ತಿಕ ವಿಭಾಗದಲ್ಲಿ 35 ವರ್ಷದೊಳಗೆ ಹಾಗೂ 35 ವರ್ಷ ಮೇಲ್ಪಟ್ಟ ಸ್ಪರ್ಧಿಗಳಿಗಾಗಿ ಪುರುಷ ಹಾಗೂ ಮಹಿಳೆಯರಿಗೆ 100 ಮೀ. ಓಟ, 200 ಮೀ. ಓಟ, 400 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ, 4/100ಮೀ ರಿಲೇ, ವೈಯಕ್ತಿಕ ವಿಭಾಗದಲ್ಲಿ ಮ್ಯೂಸಿಕಲ್ ಚೇರ್, ಲೆಮನ್ ಸ್ಪೂನ್ ಓಟ, ಗೋಣಿಚೀಲ ಓಟ, ಬಾಲ್ ಇನ್ ಬಕೆಟ್ ಹಾಗೂ ವಿಕೆಟ್ ಹಿಟ್ಟಿಂಗ್ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು







