ಕೆಎಸ್‌ಸಿಎ ಕ್ರಿಕೆಟ್: ನೇತಾಜಿ ಪರ್ಕಳ ಚಾಂಪಿಯನ್

ಮಂಗಳೂರು, ಮಾ.11: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯ ಮಟ್ಟದ ಎರಡನೇ ವಿಭಾಗದ ಕ್ರಿಕೆಟ್ ಪಂದ್ಯಾಟವನ್ನು ಪರ್ಕಳದ ನೇತಾಜಿ ಕ್ರಿಕೆಟ್ ಕ್ಲಬ್ ಗೆದ್ದುಕೊಂಡಿತು.
ಇಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ನೇತಾಜಿ ತಂಡವು, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 2 ವಿಕೆಟ್‌ಗಳ ಅಂತರದಿಂದ ಪರಾಭವಗೊಳಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಬ್ರಹ್ಮಾವರ ತಂಡವು ನೇತಾಜಿ ತಂಡದ ತೀಕ್ಷ್ಣ ಬೌಲಿಂಗ್ ದಾಳಿಯೆದುರು ಕುಸಿತ ಕಂಡು 101 ರನ್ ಗಳಿಸುವಷ್ಟರಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ನಾಯಕ ಅಭಿಜಿತ್ ಅವರು ದಿವ್ಯಾಂಶು ಜತೆಗೂಡಿ 115 ರನ್‌ಗಳನ್ನು ಪೇರಿಸಿ ತಂಡದ ಮೊತ್ತವನ್ನು 211ಕ್ಕೆ ಏರಿಸಿದರು.ಅಭಿಜಿತ್ 98 ರನ್ ಗಳಿಸಿದರು.ನೇತಾಜಿ ತಂಡದ ನಿಖಿಲ್ 3, ಕುಂದನ್ 2, ಧೀರಜ್ 2, ರೋಹಿತ್ 2 ವಿಕೆಟ್ ಪಡೆದರು.
ಗೆಲ್ಲಲು 212 ರನ್‌ಗಳ ಗುರಿಯನ್ನು ಬೆನ್ನತ್ತಿದ ನೇತಾಜಿ ತಂಡಕ್ಕೆ ನಿತಿನ್ ಉಪಾಧ್ಯ (72), ನೀಲವ್ (36) ಮೊದಲ ವಿಕೆಟ್‌ಗೆ 85 ರನ್ ಸೇರಿಸಿದರು. ಬಳಿಕ ಆಶೀಷ್ ನಾಯಕ್ (40), ಋಷಬ್ ನಾಯಕ್ (27) ಉತ್ತಮವಾಗಿ ಆಡಿ 3.2 ಓವರುಗಳು ಉಳಿದಿರುವಂತೆ ತಂಡಕ್ಕೆ ಎರಡು ವಿಕೆಟ್‌ಗಳ ಅಂತರದ ಜಯ ದೊರಕಿಸಿಕೊಟ್ಟರು.





