ಝುಲೇಖಾ ಯೆನೆಪೋಯ ಪ್ರಿವೆಂಟಿವ್ ಆಂಕಾಲಜಿ ಕ್ಲಿನಿಕ್, ಕಾಲ್ಪೊಸ್ಕೋಪ್ ಘಟಕ ಉದ್ಘಾಟನೆ

ಕೊಣಾಜೆ: ದೇರಳಕಟ್ಟೆಯ ಝುಲೇಖಾ ಯೆನೆಪೋಯ ಹಾಗೂ ಟಾಟಾ ಟ್ರಸ್ಟ್ ಸಹಕಾರದೊಂದಿಗೆ ನಿರ್ಮಾಣ ಗೊಂಡಿರುವ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಪ್ರಿವೆಂಟಿವ್ ಆಂಕಾಲಜಿ ಕ್ಲಿನಿಕ್ ಮತ್ತು ಕಾಲ್ಪೊಸ್ಕೋಪ್ (ಕ್ಯಾನ್ಸರ್ ತಡೆಗಟ್ಟುವ ಕ್ಲಿನಿಕ್ ಹಾಗೂ ಕಾಲ್ಪೋಸ್ಕೋಪ್) ಘಟಕದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸರಕಾರದ ಅರಣ್ಯ ಪ್ರದೇಶ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಐಎಎಸ್ ಅವರು ಶುಕ್ರವಾರ ಉದ್ಘಾಟಿಸಿದರು.
ಈ ವೇಳೆ ದೇರಳಕಟ್ಟೆ ಝುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯ ಸ್ತ್ರೀರೋಗ ಆಂಕೊಲಾಜಿ ಲ್ಯಾಪ್ರಸ್ಕೋಪಿಕ್ ಮತ್ತು ರೊಬೊಟಿಕ್ ಶಸ್ತ್ರಚಿಕಿತ್ಸಕಿ ಡಾ. ಮರಿಯಮ್ ಅಂಜುಮ್ ಇಫ್ತಿಕಾರ್ ಮಾತನಾಡಿ, ಆಸ್ಪತ್ರೆಯಲ್ಲಿ ಬಾಯಿ, ಸ್ತನ ಮತ್ತು ಸರ್ವೈಕಲ್ ಕ್ಯಾನ್ಸರ್ ತಡೆಗಟ್ಟುವಿಕೆ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆ ನಿವಾರಣೆ ಹಾಗೂ ಪತ್ತೆ ಕಾರ್ಯಕ್ಕೆ ಮ್ಯಾಮೊಗ್ರಾಮ್ ನಂತಹ ಉತ್ತಮ ವಿಧಾನವನ್ನು ಆಸ್ಪತ್ರೆ ಹೊಂದಿದೆ. ಸರ್ವೈಕಲ್ ಕ್ಯಾನ್ಸರ್ ಗೆ ಎಚ್‌ಪಿವಿ ಪರೀಕ್ಷೆ ಹಾಗೂ ಎಚ್‌ಪಿವಿ ವ್ಯಾಕ್ಸಿನೇಷನ್ ನಡೆಸಲಾಗುತ್ತಿದೆ. 9 ರಿಂದ 15ರ ಹರೆಯದವರಿಗೆ ಎರಡು ಡೋಸ್ ಹಾಗೂ 15ರಿಂದ ಮೇಲ್ಪಟ್ಟವರಿಗೆ ಮೂರು ಡೋಸ್ ಗಳನ್ನು ನೀಡಲಾಗುತ್ತಿದೆ. ಸರ್ವೈಕಲ್ ಕ್ಯಾನ್ಸರ್ ಇತರೆ ಕ್ಯಾನ್ಸರ್ ನಂತೆ ಇರದೆ, ಬೇಗನ ಪತ್ತೆ ಹಚ್ಚಿದಲ್ಲಿ ಗುಣಮುಖರನ್ನಾಗಿಸಲು ಸಾಧ್ಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಗೂ ದೇಶದಲ್ಲಿ ಸ್ತನ ಕ್ಯಾನ್ಸರ್ ಅತಿಹೆಚ್ಚು ಬಾಧಿತರಿದ್ದು, ಜೊತೆಗೆ ಸರ್ವೈಕಲ್ ಕ್ಯಾನ್ಸರ್ ರೋಗಿಗಳು ಹೆಚ್ಚಾಗುತ್ತಲೇ ಇದ್ದಾರೆ. ಹೊಸತಾಗಿ 1,20,000 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಪ್ರತಿ ಏಳು ನಿಮಿಷಗಳಿಗೆ ಒಬ್ಬರು ಮಹಿಳೆ ಸರ್ವೈಕಲ್ ಕ್ಯಾನ್ಸರಿನಿಂದ ಸಾವನ್ನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಸ್ಥೆ ಅತಿಹೆಚ್ಚು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ, ತಪಾಸಣೆ, ಆರಂಭಿಕ ಪತ್ತೆ ಹಾಗೂ ಗುಣಪಡಿಸುವ ಉದ್ದೇಶವನ್ನು ಹೊಂದಿದೆ. ಇದೀಗ ಆಸ್ಪತ್ರೆಯಲ್ಲಿ ನೂತನ ಕಾಲ್ಪೋಸ್ಕೋಪಿ ತಂತ್ರಜ್ಞಾನವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಉದ್ಘಾಟಿಸಿದ್ದಾರೆ. ದೇಹದ ಖಾಸಗಿ ಭಾಗಗಳಲ್ಲಿರುವ ಸರ್ವಿಕ್ಸ್ ಗಳನ್ನು ಪತ್ತೆ ಹಚ್ಚಲು ಹಾಗೂ ಚಿಕಿತ್ಸೆ ನೀಡುವ ಕೆಲಸವನ್ನು ತಂತ್ರಜ್ಞಾನ ನಿರ್ವಹಿಲಿದೆ. ಜರ್ಮನಿಯ ತಂತ್ರಜ್ಞಾನವಾಗಿರುವ ಯಂತ್ರದ ಮೂಲಕ ಕ್ಯಾನ್ಸರ್ ಇರುವ 3ಡಿ ಎಕ್ಸ್ ರೇ ಪ್ರಿಂಟಿಂಗ್ ತೆಗೆಯಲು ಸಾಧ್ಯ. ದೇಶಾದ್ಯಂತ ರೂ. 15 ಲಕ್ಷದಷ್ಟು ವೆಚ್ಚದ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಮಿತದರಲ್ಲಿ ನಡೆಸಲಾಗುವುದು. ಯೆನೆಪೋಯ ಸಂಸ್ಥೆ ಆರೋಗ್ಯವಂತ ಮಹಿಳೆ ಅನ್ನುವ ಕಾರ್ಯಕ್ರಮದಡಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಮಹಿಳೆಯರ ಆರೋಗ್ಯ ತಪಾಸಣೆ, ಮೊಬೈಲ್ ಬಸ್ ಕ್ಲಿನಿಕ್, ಬುಡಕಟ್ಟು ಪ್ರದೇಶದಲ್ಲಿರುವ ಮಹಿಳೆಯರನ್ನು ಆರೋಗ್ಯವಂತರನ್ನಾಗಿಸುವ ಪ್ರಯತ್ನದಲ್ಲಿ ನಿರತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯೆನೆಪೋಯ ವಿ.ವಿ.ಯ ಸಹಕುಲಪತಿ ಡಾ. ಬಿ.ಎಚ್ ಶ್ರೀಪತಿ ರಾವ್, ಕುಲಸಚಿವ ಡಾ. ಗಂಗಾಧರ ಸೋಮಯಾಜಿ, ವೈದ್ಯಕೀಯ ಅಧೀಕ್ಷಕ ಡಾ. ಪ್ರಕಾಶ್ ಸಲ್ದಾನ್ಹ, ಯೆನೆಪೋಯ ವೈದ್ಯಕೀಯ ಕಾಲೇಜು ಡೀನ್ ಡಾ. ಮೂಸಬ್ಬ, ಹಣಕಾಸು ವಿಭಾಗದ ಅಧಿಕಾರಿ ಅಬ್ದುಲ್ ಮೊಹ್ಸಿನ್, ಆಂಕಾಲಜಿ ವಿಭಾಗ ಮುಖ್ಯಸ್ಥ ಡಾ. ಜಲಾಲುದ್ದೀನ್ ಅಕ್ಬರ್, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ಬೋನಿ ಪೌಲ್, ರಾಮಚಂದ್ರ ಶೆಟ್ಟಿ, ವಿಭಾಗದ ಡಾ. ಅಶ್ವಿನಿ, ಡಾ.ಪೂನಂ, ಡಾ.ಶ್ರುತಿ, ಡಾ.ರಚನಾ, ಡಾ.ಲ್ಯಾನ್ಸಿ, ಆಸ್ಪತ್ರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸವಿತಾ ಮುಂತಾದವರು ಉಪಸ್ಥಿತರಿದ್ದರು.