ವಸತಿ ಶಾಲೆಗಳ ಪ್ರವೇಶಾತಿ ಪರೀಕ್ಷೆ: ಮಾ.12ರಂದು ಸೆ.144 ಜಾರಿ

ಮಂಗಳೂರು, ಮಾ.11: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾ.12ರಂದು ವಸತಿ ಶಾಲೆಗಳ ಪ್ರವೇಶಾತಿಗೆ ಪರೀಕ್ಷೆ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸೆ.144ರ ಅನ್ವಯ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಾ.12ರಂದು ಬೆಳಗ್ಗೆ 8ರಿಂದ 3ರವರೆಗೆ ವಸತಿ ಶಾಲೆಗಳ ಪ್ರವೇಶಾತಿ ಪರೀಕ್ಷೆ ನಡೆಯುವ ಬಲ್ಮಠ ಸರಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜು ಮತ್ತು ಮೂಡುಬಿದಿರೆ ಶ್ರೀ ಮಹಾವೀರ ಪಿಯು ಕಾಲೇಜು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಆದೇಶಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ 5 ಮಂದಿ ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ತಿರುಗಾಡುವಂತಿಲ್ಲ. ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವುದು ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಅಥವಾ ಇನ್ನಿತರ ವಸ್ತುಗಳನ್ನು ಹಂಚುವುದು, ರವಾನಿಸುವುದನ್ನು ನಿಷೇಧಿಸಿದೆ. ಆ್ಯಸಿಡ್, ಸ್ಪೋಟಕ, ಮಾರಕಾಯುಧ ಸಾಗಿಸುವಂತಿಲ್ಲ. ಸಂಜ್ಞೆಗಳನ್ನು ಮಾಡುವಂತಿಲ್ಲ. ಪರೀಕ್ಷಾ ಅವಧಿಗಿಂತ ಅರ್ಧಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯಲ್ಲಿ ಜೆರಾಕ್ಸ್ ಅಂಗಡಿ ಕಾರ್ಯನಿರ್ವಹಿಸುವುದು, ಮೊಬೈಲ್ ದೂರವಾಣಿ ಹಾಗೂ ಬ್ಲೂಟೂತ್ ಇತ್ಯಾದಿ ಇಲೆಕ್ಟ್ರಾನಿಕ್ ಸಂಪರ್ಕ ಉಪಕರಣ ಬಳಕೆ ಮಾಡುವಂತಿಲ್ಲ. ಈ ನಿಷೇಧಾಜ್ಞೆಯು ಸರಕಾರದ ಆದೇಶದಂತೆ ನಡೆಸಲ್ಪಡುವ ಯವುದೇ ಕಾರ್ಯಕ್ರಮಕ್ಕೆ ಅನ್ವಯವಾಗುವುದಿಲ್ಲ ಎಂದು ಪೊಲೀಸ್ ಕಮಿಷನರ್ ಆದೇಶದಲ್ಲಿ ತಿಳಿಸಿದ್ದಾರೆ.







