ಇಂದ್ರಾಳಿ ರೈಲ್ವೆ ಸೇತುವೆ, ಪರ್ಕಳ ಭೂಸ್ವಾಧೀನ ಪರಿಹಾರಕ್ಕೆ ಹೆಚ್ಚುವರಿ ಅನುದಾನ
ಉಡುಪಿ, ಮಾ.11: ತೀರ್ಥಹಳ್ಳಿ-ಮಲ್ಪೆರಾಷ್ಟ್ರೀಯ ಹೆದ್ದಾರಿ -169ಎ ರಸ್ತೆಯ ಉಡುಪಿಯಿಂದ ಪರ್ಕಳವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಗೊಂಡಿದ್ದು, ಇಂದ್ರಾಳಿ ರೈಲ್ವೆ ಬ್ರಿಡ್ಜ್ ಮೇಲ್ಸೇತುವೆ ಕಾಮಗಾರಿಗೆ ಹೆಚ್ಚುವರಿ ಯಾಗಿ 5.53ಕೋಟಿ ರೂ. ಹಾಗೂ ಪರ್ಕಳ ಭಾಗದಲ್ಲಿ ಭೂಸ್ವಾಧೀನ ಪರಿಹಾರಕ್ಕೆ ಹೆಚ್ಚುವರಿಯಾಗಿ 7.84ಕೋಟಿ ರೂ. ಸೇರಿದಂತೆ ಪರಿಷ್ಕೃತ 18.89 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.
ಇಂದ್ರಾಳಿ ರೈಲ್ವೆ ಬ್ರಿಡ್ಜ್ ಮೇಲ್ಸೇತುವೆ ಕಾಮಗಾರಿ ನಡೆಸಲು ರೈಲ್ವೆ ಇಲಾಖೆ ಅನುಮತಿ ದೊರಕುವಲ್ಲಿ ವಿಳಂಬವಾಗಿರುವುದರಿಂದ ಹಿಂದಿನ ಮೊತ್ತಕ್ಕೆ ಸೇತುವೆ ನಿರ್ಮಿಸುವುದು ಕಷ್ಟವಾದ್ದರಿಂದ ಹೊಸ ದರ ಪಟ್ಟಿಯಂತೆ ಹೆಚ್ಚುವರಿಯಾಗಿ 5.53 ಕೋಟಿ ಹಾಗೂ ಪರ್ಕಳ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಮಾಡಲಾಗಿದ್ದು ಇದರ ಪರಿಹಾರಕ್ಕೆ ಹಿಂದೆ ಮೀಸಲಿಟ್ಟ ಅನುದಾನಕ್ಕೆ ಹೆಚ್ಚುವರಿಯಾಗಿ 7.84 ಕೋಟಿ ಮೊತ್ತ ಸೇರಿದಂತೆ ಒಟ್ಟು ರೂ 18.89 ಕೋಟಿ ಮೊತ್ತದ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಿ ಅನುಮೋದನೆಗಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಆದೇಶ ಹೊರಡಿಸುವಲ್ಲಿ ಸರಕಾರದ ಮಟ್ಟದಲ್ಲಿ ಶ್ರಮ ವಹಿಸಿದ ಸಂಸದರು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಶೋಭಾ ಕರಂದ್ಲಾಜೆ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಶಾಸಕ ಕೆ.ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.





