ವಿಶ್ವಸಂಸ್ಥೆಯ ಅಜೆಂಡಾದಲ್ಲಿ ಕಾಶ್ಮೀರ ವಿಷಯ ಸೇರ್ಪಡೆ ಸುಲಭವಲ್ಲ: ಭುಟ್ಟೊ

ವಿಶ್ವಸಂಸ್ಥೆ, ಮಾ.11: ವಿಶ್ವಸಂಸ್ಥೆಯಲ್ಲಿ ಚರ್ಚೆಗೆ ಎತ್ತಿಕೊಳ್ಳುವ ಪ್ರಮುಖ ಅಜೆಂಡಾಗಳ ಪಟ್ಟಿಯಲ್ಲಿ ಕಾಶ್ಮೀರದ ವಿಷಯವನ್ನು ಸೇರ್ಪಡೆಗೊಳಿಸುವುದು ಅತ್ಯಂತ ಕಷ್ಟದ ಕಾರ್ಯವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಝರ್ದಾರಿ ಒಪ್ಪಿಕೊಂಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ `ಮಹಿಳಾ ಸ್ಥಿತಿಗತಿಯ' ಕುರಿತ ಅಧಿವೇಶನದ ನೇಪಥ್ಯದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು `ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಕುರಿತು ಪಾಕಿಸ್ತಾನದ ಪ್ರಸ್ತಾವನೆ ಅಥವಾ ಕಾರ್ಯಸೂಚಿಗೆ ಸದಸ್ಯ ದೇಶಗಳಿಂದ ಯಾವುದೇ ಬೆಂಬಲ ಪಡೆಯಲು ತಮ್ಮ ದೇಶ ವಿಫಲವಾಗಿದೆ' ಎಂದರು. ಈ ಸಂದರ್ಭ ಭಾರತದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸುವಾಗ ಮೊದಲು `ನಮ್ಮ ಮಿತ್ರದೇಶ' ಎಂದರು, ಬಳಿಕ ಸಾವರಿಸಿಕೊಂಡು `ನಮ್ಮ ನೆರೆದೇಶ' ಎಂಬ ಪದ ಬಳಸಿದರು.
ಫೆಲೆಸ್ತೀನ್ ಬಿಕ್ಕಟ್ಟು ಮತ್ತು ಕಾಶ್ಮೀರದ ವಿಷಯದಲ್ಲಿ ಸಮಾನತೆ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಭುಟ್ಟೊ ` ನಿಮ್ಮ ಹೋಲಿಕೆಯು ತುಂಬಾ ಸಮರ್ಥನೀಯವಾಗಿದೆ ಎಂದು ಭಾವಿಸುತ್ತೇನೆ. ಕಾಶ್ಮೀರದ ಜನರ ದುರವಸ್ಥೆ ಮತ್ತು ಫೆಲೆಸ್ತೀನೀಯರ ದುಸ್ಥಿತಿಯ ನಡುವೆ ಅನೇಕ ಸಾಮ್ಯತೆಯಿದೆ. ಎರಡೂ ವಿಷಯಗಳನ್ನು ವಿಶ್ವಸಂಸ್ಥೆ ಗಮನಿಸದೆ ಉಳಿದಿದೆ ಎಂದು ಹೇಳುವುದು ನ್ಯಾಯೋಚಿತವಾಗಿದೆ.
ಫೆಲೆಸ್ತೀನ್ ಬಿಕ್ಕಟ್ಟಿನ ಕುರಿತು ಮಾತ್ರವಲ್ಲ, ಕಾಶ್ಮೀರದ ವಿಷಯದ ಬಗ್ಗೆಯೂ ವಿಶ್ವಸಂಸ್ಥೆ ಹೆಚ್ಚಿನ ಗಮನ ನೀಡಬೇಕಾಗಿ ನಾವು ಬಯಸುತ್ತೇವೆ' ಎಂದರು. ಜತೆಗೆ, ಒಂದು ವೇಳೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಚರ್ಚೆಗೆ ಬಂದರೂ, ನಮ್ಮ ಮಿತ್ರದೇಶ.. ನಮ್ಮ.. ನೆರೆದೇಶವು ಇದನ್ನು ಬಲವಾಗಿ ಆಕ್ಷೇಪಿಸುತ್ತದೆ. ಅವರ ಅಬ್ಬರದ ಆಕ್ಷೇಪದಿಂದ ವಾಸ್ತವಾಂಶ ಮರೆಗೆ ಸರಿಯುತ್ತದೆ. ಇದು ಅಂತರಾಷ್ಟ್ರೀಯ ಸಮುದಾಯಕ್ಕೆ ಸಂಬಂಧಿಸಿದ ವಿವಾದಿತ ವಿಷಯವಲ್ಲ ಎಂದು ಹೇಳಲು ಪ್ರಯತ್ನಿಸುತ್ತಾರೆ. ನೆರೆರಾಷ್ಟ್ರದ ಒತ್ತಡ ತಂತ್ರದಿಂದಾಗಿ ವಿಶ್ವಸಂಸ್ಥೆಯ ಅಜೆಂಡಾದಲ್ಲಿ ಕಾಶ್ಮೀರದ ವಿಷಯವನ್ನು ಸೇರಿಸಲು ನಮಗೆ ಕಷ್ಟವಾಗುತ್ತಿದೆ ಎಂದು ಭುಟ್ಟೋ ಹೇಳಿದ್ದಾರೆ.
ಸತ್ಯವನ್ನು ಅರ್ಥಮಾಡಿಸಲು ನಾವು ಇದುವರೆಗೆ ವಿಫಲವಾಗಿದ್ದರೂ ನಮ್ಮ ಪ್ರಯತ್ನವನ್ನು ಮುಂದುವರಿಸಲಿದ್ದೇವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಥವಾ ಇತರ ವೇದಿಕೆಗಳಲ್ಲಿ ಈ ಕುರಿತು ಗಮನ ಸೆಳೆಯುವ ಪ್ರಯತ್ನ ಮುಂದುವರಿಯಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಹೇಳಿದ್ದಾರೆ.