ಇಂಡೋನೇಶ್ಯಾ: ಮೆರಾಪಿ ಜ್ವಾಲಾಮುಖಿ ಸ್ಫೋಟ

ಜಕಾರ್ತ, ಮಾ.11: ಇಂಡೋನೇಶ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿರುವ ಮೆರಾಪಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು ಸುಮಾರು 1.5 ಕಿ.ಮೀ ದೂರಕ್ಕೆ ಲಾವಾರಸ ಚಿಮ್ಮಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಇಂಡೊನೇಶ್ಯಾದ ಯೋಗ್ಯಕರ್ತ ವಿಶೇಷ ವಲಯದಲ್ಲಿರುವ ಮೆರಾಪಿ ಪರ್ವತದಲ್ಲಿ ಸ್ಥಳೀಯ ಕಾಲಮಾನ ಅಪರಾಹ್ನ 12 ಗಂಟೆಗೆ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ಇಂಡೋನೇಶ್ಯಾದ ವಿಪತ್ತು ನಿರ್ವಹಣಾ ಏಜೆನ್ಸಿ ಹೇಳಿದೆ. ಜ್ವಾಲಾಮುಖಿಯಿಂದ ಲಾವಾರಸ ಹೊರಚಿಮ್ಮುತ್ತಿರುವುದು ಗಮನಕ್ಕೆ ಬಂದೊಡನೆ, ಜ್ವಾಲಾಮುಖಿಯ ಕೇಂದ್ರದಿಂದ ಸುಮಾರು 7 ಕಿ.ಮೀ ಸುತ್ತಳತೆಯ ಪ್ರದೇಶವನ್ನು ಅಪಾಯವಲಯ ಎಂದು ಗುರುತಿಸಿ, ಈ ವಲಯದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಪರ್ವತದ ಸುತ್ತಮುತ್ತಲಿನ ನಿವಾಸಿಗಳಿಗೆ ಸೂಚಿಸಲಾಗಿದೆ.
9,721 ಅಡಿ ಎತ್ತರವಿರುವ ಮೆರಾಪಿ ಪರ್ವತ ಇಂಡೋನೇಶ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಯಾಗಿದ್ದು ಲಾವಾರಸದ ತೀವ್ರತೆ ಇನ್ನಷ್ಟು ಹೆಚ್ಚಿದರೆ ಸುತ್ತಮುತ್ತಲಿನ ನಿವಾಸಿಗಳ ಸ್ಥಳಾಂತರಕ್ಕೆ ಸೂಚಿಸಲಾಗುವುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. 2010ರಲ್ಲಿ ಮೆರಾಪಿ ಜ್ವಾಲಾಮುಖಿ ತೀವ್ರವಾಗಿ ಸ್ಫೋಟಿಸಿದ್ದು 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.