ಸುರತ್ಕಲ್ ಟೋಲ್‌ಗೇಟ್ ಬಂದ್ ಆಗಿ 100 ದಿನ ಹಿನ್ನೆಲೆ: ಡಿವೈಎಫ್‌ಐ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಸುರತ್ಕಲ್, ಮಾ.11: ಸುರತ್ಕಲ್ ಟೋಲ್‌ಗೇಟ್ ಬಂದ್ ಆಗಿ ನೂರು ದಿನಗಳಾದ ಹಿನ್ನೆಲೆಯಲ್ಲಿ ಡಿವೈಎಫ್‌ಐ ಕಾರ್ಯಕರ್ತರು ಟೋಲ್‌ಗೇಟ್ ಬಳಿ ಜಮಾಯಿಸಿ ಸಂಭ್ರಮಾಚರಿಸಿದರು.
ಈ ವೇಳೆ ಮಾತನಾಡಿದ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಟೋಲ್‌ಗೇಟ್ ವಿರುದ್ಧ ಅವಿರತವಾಗಿ ನಡೆಸಿದ ಹೋರಾಟ ಫಲವಾಗಿ ಅದು ಮಚ್ಚಲ್ಪಟ್ಟಿದೆ. ಈ ಹೋರಾಟ ಜಿಲ್ಲೆಯ ಐತಿಹಾಸಿಕ ಹೋರಾಟವಾಗಿ ಇತಿಹಾಸದಲ್ಲಿ ಗುರುತಿಸಲ್ಪಡುತ್ತಿದೆ. ಈ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲರಿಗೆ ಮತ್ತು ನೇತೃತ್ವ ವಹಿಸಿದ್ದ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಗೆ ಅಭಿನಂದನೆ ಸಲ್ಲಿಸುವುದಾಗಿ ನುಡಿದರು.
ಈ ಟೋಲ್‌ಗೇ ಬಂದ್ ಆಗಿ ನೂರದಿನಗಳಾಗಿದ್ದು, ಈ ಹೆದ್ದಾರಿಯಾಗಿ ಸಂಚರಿಸುತ್ತಿದ್ದ ಜನರು ಕಳೆದುಕೊಳ್ಳುತ್ತಿದ್ದ 15 ಕೋಟಿ ರೂ. ಲಾಭವಾಗಿದೆ. ಆದರೆ, ಟೋಲ್ ಸುಂಕದ ಹೆಸರಿನಲ್ಲಿ ಉಡುಪಿ- ಮಂಗಳೂರು ಸಂಚರಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಿದ್ದ ದರವನ್ನು ಈ ವರೆಗೂ ಇಳಿಸಿಲ್ಲ. ಕೂಡಲೇ ಬಸ್ ಮಾಲಕರು ಎಚ್ಚೆತ್ತುಕೊಂಡು ಪ್ರತಿ ಟಿಕೆಟ್ ದರದಲ್ಲಿ 5ರೂ. ಇಳಿಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.