ಸಾರ್ವಭೌಮತೆ ರಕ್ಷಣೆಗೆ ಯುದ್ಧಕಾಲದ ಕಾನೂನು ಜಾರಿ: ಚೀನಾ ಸೇನೆ ಆಗ್ರಹ

ಬೀಜಿಂಗ್, ಮಾ.11: ತೈವಾನ್ ವಿಷಯಕ್ಕೆ ಸಂಬಂಧಿಸಿ ಅಮೆರಿಕದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ದೇಶದ ಸಾರ್ವಭೌಮತೆಯ ರಕ್ಷಣೆಗೆ ಯುದ್ಧಕಾಲದ ಕಾನೂನನ್ನು ದೇಶದಲ್ಲಿ ಜಾರಿಗೊಳಿಸಿ ಯುದ್ಧಸನ್ನದ್ಧತೆ ತೀವ್ರಗೊಳಿಸುವಂತೆ ಚೀನೀ ಸೇನೆ ಸರಕಾರದ ಮೇಲೆ ಒತ್ತಡ ಹೆಚ್ಚಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚೀನಾ ಅಧ್ಯಕ್ಷರಾಗಿ ಕ್ಸಿಜಿಂಪಿಂಗ್ ಅವರನ್ನು ದಾಖಲೆ ಮೂರನೇ ಅವಧಿಗೆ ನೇಮಕಗೊಳಿಸುವ ನಿರ್ಣಯವನ್ನು ಚೀನಾದ ಸಂಸತ್ತು ಶುಕ್ರವಾರ ಭರ್ಜರಿ ಬಹುಮತದೊಂದಿಗೆ ಅನುಮೋದಿಸಿತ್ತು. ಸಂಸತ್ತಿನ ಶನಿವಾರದ ಅಧಿವೇಶನದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ-ಚೀನೀ ಸೇನೆ), ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್ಪಿಸಿ)ಯ ಪ್ರತಿನಿಧಿಗಳು ಇಂತಹ ಕಾನೂನನ್ನು ತುರ್ತಾಗಿ ಜಾರಿಗೊಳಿಸುವ ಅಗತ್ಯದ ಬಗ್ಗೆ ಬಲವಾಗಿ ಪ್ರತಿಪಾದಿಸಿದರು ಎಂದು `ಸೌತ್‌ಚೀನಾ ಮಾರ್ನಿಂಗ್ ಪೋಸ್ಟ್' ಪತ್ರಿಕೆ ವರದಿ ಮಾಡಿದೆ.
ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷ(ಸಿಪಿಸಿ)ದ ರಬ್ಬರ್ಸ್ಟ್ಯಾಂಪ್ ಎನಿಸಿಕೊಂಡಿರುವ ಸಂಸತ್ತಿನಲ್ಲಿ ಪಕ್ಷದ ಪ್ರಸ್ತಾವನೆಗೆ ಸುಲಭವಾಗಿ ಅನುಮೋದನೆ ಪಡೆಯುವಷ್ಟು ಹಿಡಿತವನ್ನು ಆಡಳಿತ ಪಕ್ಷ ಹೊಂದಿದೆ. ಯುದ್ಧಕಾಲದ ಕಾನೂನು ಜಾರಿಗೆ ಪಿಎಲ್ಎಯ ಪ್ರತಿನಿಧಿ ವು ಕ್ಸಿಹುವ ಬಲವಾಗಿ ಆಗ್ರಹಿಸಿದ್ದು ಚೀನಾ ಈ ನಿಟ್ಟಿನಲ್ಲಿ ಕ್ಷಿಪ್ರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ. ನಮ್ಮ ಯುದ್ಧಕಾಲದ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು, ಯುದ್ಧಕಾಲದ ಶಾಸನಗಳನ್ನು ಸಮಯೋಚಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಮತ್ತೊಬ್ಬ ಪಿಎಲ್ಎ ಪ್ರತಿನಿಧಿ ಯಿ ದಬಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೀನಾವು ಮೀಸಲು ಪಡೆಯನ್ನು ಒಟ್ಟುಗೂಡಿಸುವಂತಹ ಕಾನೂನುಗಳನ್ನು ತಕ್ಷಣಕ್ಕೆ ಜಾರಿಗೊಳಿಸಬೇಕು ಎಂದು ಚೀನೀ ಸೇನೆಯ ಶಾಂಡಾಂಗ್ ಪ್ರಾಂತದ ಕಮಾಂಡರ್ ಝಾಂಗ್ ಲೈಕ್ ಆಗ್ರಹಿಸಿದ್ದಾರೆ. ಪೂರ್ವ ಆಫ್ರಿಕಾದ ಡಿಬೌಟಿ ದೇಶದಲ್ಲಿ ಸೇನಾನೆಲೆ ಸ್ಥಾಪಿಸುವುದು, ಏಡನ್ ಕೊಲ್ಲಿ ಮಗತ್ತು ಸೊಮಾಲಿಯಾ ಸಮುದ್ರವ್ಯಾಪ್ತಿಯಲ್ಲಿ ನೌಕಾನೆಲೆ ಸ್ಥಾಪನೆ ಸೇರಿದಂತೆ ಸಾಗರೋತ್ತರ ಸೇನಾನೆಲೆಗಳ ಬಲವರ್ಧನೆಗೆ ಸಂಬಂಧಿಸಿದ ಕಾನೂನು ಬದಲಾವಣೆಗೆ ಪಿಎಲ್ಎ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಚೀನೀ ಮಿಲಿಟರಿಯ ಸಾಗರೋತ್ತರ ಕಾರ್ಯಾಚರಣೆಗಳ ತರ್ಕಬದ್ಧತೆ ಮತ್ತು ನ್ಯಾಯಸಮ್ಮತೆಯನ್ನು ಸುಧಾರಿಸಲು ರಾಷ್ಟ್ರೀಯ ರಕ್ಷಣೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಕಾನೂನುಗಳನ್ನು ಅಧ್ಯಯನ ನಡೆಸಬೇಕೆಂದು ಚೀನಾ ಸೇನೆಯ ದಕ್ಷಿಣವಿಭಾಗದ ನಿವೃತ್ತ ಕಮಾಂಡರ್ ಯುವಾನ್ ಯುಬಾಯಿ ಸಲಹೆ ನೀಡಿದರು.
ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಿರುವ ತೈವಾನ್ ತನ್ನ ಬೌಗೋಳಿಕ ವ್ಯಾಪ್ತಿಗೆ ಸೇರಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ, ಬಲಪ್ರಯೋಗ ನಡೆಸಿಯಾದರೂ ತೈವಾನ್ ಅನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಘೋಷಿಸಿದೆ. ತೈವಾನ್ ಬೆಂಬಲಕ್ಕೆ ನಿಂತಿರುವ ಅಮೆರಿಕ ಇತ್ತೀಚೆಗೆ ದಕ್ಷಿಣ ಚೀನಾ ಸಮುದ್ರವ್ಯಾಪ್ತಿಯಲ್ಲಿ ತೈವಾನ್ ಸೇನೆಯೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿದೆ. `ತನ್ನ ಏಳಿಗೆಯನ್ನು ಸಹಿಸದ ಅಮೆರಿಕ, ತೈವಾನ್ ಅನ್ನು ದಾಳವಾಗಿ ಬಳಸಿಕೊಂಡು ತನ್ನ ವಿರುದ್ಧ ಕತ್ತಿಮಸೆಯುತ್ತಿದೆ' ಎಂದು ಚೀನಾ ಹೇಳುತ್ತಿದೆ.
ತೈವಾನ್ ವಿಷಯದಲ್ಲಿ ಯುದ್ಧಸಾಧ್ಯತೆ
ತೈವಾನ್ ವಿರುದ್ಧ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ಒತ್ತಡವನ್ನು ಚೀನಾ ಬಿಗುಗೊಳಿಸಿರುವಂತೆಯೇ, ತೈವಾನ್ ವಿಷಯದಲ್ಲಿ 2027ರ ಮೊದಲೇ ಯುದ್ಧ ಭುಗಿಲೇಳುವ ಸಾಧ್ಯತೆಯಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಯುದ್ಧಕಾಲದ ಕಾನೂನು ಜಾರಿಗೆ ಚೀನಾದಲ್ಲಿ ಆಗ್ರಹ ಹೆಚ್ಚಲು ತೈವಾನ್ ಬಿಕ್ಕಟ್ಟು ಪ್ರಧಾನ ಕಾರಣ ಎಂದು ಮಿಲಿಟರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ತೈವಾನ್ ಸ್ವಾತಂತ್ರ್ಯ ಪಡೆಗಳ ಚಟುವಟಿಕೆ ಹೆಚ್ಚಿರುವುದು ಚೀನಾದ ರಾಷ್ಟ್ರೀಯ ಸಾರ್ವಭೌಮತೆಗೆ ಮತ್ತು ಪ್ರಾದೇಶಿಕ ಸಮಗ್ರತೆಗೆ ತೀವ್ರ ಬೆದರಿಕೆ ಒಡ್ಡಿದೆ. ಪ್ರತ್ಯೇಕತಾ ವಿರೋಧಿ ಕಾನೂನು ಮಾತೃಭೂಮಿಯನ್ನು ಶಾಂತಿಯುತ ರೀತಿಯಲ್ಲಿ ಏಕೀಕರಿಸುವ ಶರತ್ತುಗಳನ್ನು ಸ್ಪಷ್ಟಪಡಿಸಿದೆ. ಆದರೆ ಈಗ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಹೊಸ ಯುಗದಲ್ಲಿ ರಾಷ್ಟ್ರೀಯ ರಕ್ಷಣೆ ಮತ್ತು ಮಿಲಿಟರಿ ವ್ಯವಸ್ಥೆಯ ಬಲಪಡಿಸುವಿಕೆ, ಮಿಲಿಟರಿ ಹೋರಾಟಗಳಿಗೆ ಸಿದ್ಧತೆ ಹೆಚ್ಚು ನಿರ್ಣಾಯಕ ಮತ್ತು ಅತ್ಯಗತ್ಯವಾಗಿದೆ. ಆದ್ದರಿಂದ ದೇಶವು ಯುದ್ಧಕಾಲದ ಕಾನೂನು ವ್ಯವಸ್ಥೆಯನ್ನು ಸ್ಥಾಪಿಸಲು ಇದು ಸಕಾಲವಾಗಿದೆ ಎಂದು ಚೀನಾದ ಮಿಲಿಟರಿ ತಜ್ಞ ಕ್ಸಿ ಡಾನ್ ಹೇಳಿದ್ದಾರೆ.