ಪ್ರಧಾನಿ ಮೋದಿ ಭೇಟಿ ವೇಳೆ ಭಾರತ-ಆಸ್ಟ್ರೇಲಿಯ ಪಂದ್ಯ ಅಡ್ಡಿಪಡಿಸುವ ಬೆದರಿಕೆ: ಖಲಿಸ್ತಾನ್ ಬೆಂಬಲಿತ ಇಬ್ಬರ ಬಂಧನ

ಹೊಸದಿಲ್ಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ವಾರ ಆರಂಭವಾದ ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಖಲಿಸ್ತಾನ್ ಪರ ಗುಂಪುಗಳ ಬೆಂಬಲಿತ ಇಬ್ಬರನ್ನು ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಸೈಬರ್ ಸೆಲ್ ಬಂಧಿಸಿದೆ.
ಸಿಮ್ ಬಾಕ್ಸ್ ತಂತ್ರಜ್ಞಾನ ಬಳಸಿ ಪಂದ್ಯದ ವೇಳೆ ಬೆದರಿಕೆ ಹಾಕಿದ್ದಕ್ಕಾಗಿ ಕ್ರಮವಾಗಿ ಸತ್ನಾ ಹಾಗೂ ರೇವಾ ಜಿಲ್ಲೆಗಳಿಂದ ಆರೋಪಿಗಳನ್ನು ಅಪರಾಧ ವಿಭಾಗ ಬಂಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯದ ಪ್ರಧಾನಿ ಅಂಥೋನಿ ಅಲ್ಬನೀಸ್ ಅವರು ಕ್ರಿಕೆಟ್ ಪಂದ್ಯಕ್ಕಾಗಿ ಅಹಮದಾಬಾದ್‌ನಲ್ಲಿದ್ದಾಗ ಬೆದರಿಕೆ ಹಾಕಲಾಗಿತ್ತು. ಮಾಹಿತಿ ಪಡೆದ ಅಹಮದಾಬಾದ್ ಕ್ರೈಂ ಬ್ರಾಂಚ್ ತನಿಖೆ ಆರಂಭಿಸಿ ಆರೋಪಿಗಳ ಪತ್ತೆಗೆ ಮುಂದಾಗಿತ್ತು.
ಆರೋಪಿಗಳು ಸುಧಾರಿತ ಸಿಮ್ ಬಾಕ್ಸ್ ತಂತ್ರಜ್ಞಾನವನ್ನು ಬಳಸುತ್ತಿದ್ದರು, ಕೆಲವೊಮ್ಮೆ ಅದನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಮ್ ಬಾಕ್ಸ್ ಆಪರೇಟರ್ ಯಾವುದೇ ಸಂಖ್ಯೆಯ ಸಿಮ್ ಕಾರ್ಡ್‌ಗಳನ್ನು ನಿರ್ವಹಿಸಲು ಅನುಮತಿಸುತ್ತದೆ.
ಆರೋಪಿಗಳ ಸ್ಥಳಗಳನ್ನು ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಮತ್ತು ಪಂಜಾಬ್‌ನಲ್ಲಿ ಪತ್ತೆಹಚ್ಚಲಾಗಿದೆ. ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ನಕಲಿ ಟ್ವಿಟರ್ ಹ್ಯಾಂಡಲ್‌ಗಳಿಂದಲೂ ಬೆದರಿಕೆಗಳನ್ನು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಗುರುವಾರ ಆರಂಭವಾದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್‌ನ ಆರಂಭಿಕ ದಿನದಂದು ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಉಪಸ್ಥಿತರಿದ್ದರು.







