ಏಪ್ರಿಲ್ ವೇಳೆಗೆ 22 ಸ್ಮಾರ್ಟ್ ಸಿಟಿಗಳು ಸಿದ್ಧ: ಅಧಿಕಾರಿಗಳು

ಹೊಸ ದಿಲ್ಲಿ: ತನ್ನ ನಾಗರಿಕರಿಗೆ ಶುದ್ಧ ಹಾಗೂ ಸುಸ್ಥಿರ ಪರಿಸರ ಒದಗಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ ಪೈಕಿ ಆಗ್ರಾ, ವಾರಾಣಸಿ, ಚೆನ್ನೈ, ಪುಣೆ ಹಾಗೂ ಅಹಮದಾಬಾದ್ ಸೇರಿದಂತೆ 22 ನಗರಗಳು ಈ ಯೋಜನೆಯಡಿಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಮುಂದಿನ ತಿಂಗಳ ವೇಳೆಗೆ ಸ್ಮಾರ್ಟ್ ಸಿಟಿಗಳಾಗಿ ಸಿದ್ಧಗೊಳ್ಳಲಿವೆ ಎಂದು ರವಿವಾರ ಅಧಿಕಾರಿಗಳು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಆಧಿಕಾರಿಯೊಬ್ಬರು, ಈ ಯೋಜನೆಯಡಿ ಆಯ್ಕೆಗೊಂಡಿರುವ ಇನ್ನುಳಿದ 78 ನಗರಗಳಲ್ಲಿ ಮುಂದಿನ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಉಳಿದ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದ್ದಾರೆ.
ಜೂನ್ 25, 2015ರಂದು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ಚಾಲನೆ ನೀಡಿದ್ದರು. ಜನವರಿ 2016ರಿಂದ ಜೂನ್ 2018ರವರೆಗೆ ನಡೆದ ನಾಲ್ಕು ಸುತ್ತಿನ ಸ್ಪರ್ಧೆಯ ನಂತರ ನೂರು ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿತ್ತು.
ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರೊಂದಿಗೆ, ನಾಗರಿಕರಿಗೆ ಸಭ್ಯ ಗುಣಮಟ್ಟದ ಜೀವನ ಹಾಗೂ ಶುದ್ಧ ಮತ್ತು ಸುಸ್ಥಿರ ಪರಿಸರವನ್ನು ಒದಗಿಸುವ ನಗರಗಳನ್ನು ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಗುರಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರತಿಪಾದಿಸಿದೆ.
ಮಾರ್ಚ್ ವೇಳೆಗೆ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಪೂರ್ಣಗೊಳ್ಳುವ ನಗರಗಳ ಪೈಕಿ ಭೋಪಾಲ್, ಇಂದೋರ್, ಆಗ್ರಾ, ವಾರಾಣಸಿ, ಭುವನೇಶ್ವರ, ಚೆನ್ನೈ, ಕೊಯಂಬತ್ತೂರು, ಈರೋಡ್, ರಾಂಚಿ, ಸೇಲಂ, ಸೂರತ್, ಉದಯ್‌ಪುರ, ವಿಶಾಖಪಟ್ಟಣಂ, ಅಹಮದಾಬಾದ್, ಕಾಕಿನಾಡ, ಪುಣೆ, ವೆಲ್ಲೋರ್, ಪಿಂಪ್ರಿ-ಚಿಂಚ್‌ವಾಡ್, ಮದುರೈ, ಅಮರಾವತಿ, ತಿರುಚಿರಾಪಳ್ಳಿ ಮತ್ತು ತಂಜಾವೂರು ನಗರಗಳು ಸೇರಿವೆ.
ಕೇಂದ್ರ ಸರ್ಕಾರವು ಈ ಯೋಜನೆಗೆ ಈವರೆಗೆ ರೂ. 36,447 ಕೋಟಿ ಬಿಡುಗಡೆ ಮಾಡಿದ್ದು, ಈ ಪೈಕಿ ರೂ. 32,095 ಕೋಟಿ (ಶೇ. 88ರಷ್ಟು) ವೆಚ್ಚ ಮಾಡಲಾಗಿದೆ. ಸದ್ಯ ಈ ಯೋಜನೆಯಡಿ ಹೊಸ ನಗರಗಳನ್ನು ಸೇರ್ಪಡೆಗೊಳಿಸುವ ಯಾವ ಪ್ರಸ್ತಾಪವೂ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೇಳಿದೆ.







