ಲಂಡನ್ ನಲ್ಲಿ ಅಪಮಾನಕರ ಮಾತನ್ನಾಡಿದ ರಾಹುಲ್ ಗಾಂಧಿಯನ್ನು ದೇಶದಿಂದ ಹೊರಗೆಸೆಯಬೇಕು: ಪ್ರಗ್ಯಾ ಠಾಕೂರ್ ವಾಗ್ದಾಳಿ

ಹೊಸದಿಲ್ಲಿ: ಲಂಡನ್‌ನ ಹೌಸ್ ಆಫ್ ಕಾಮನ್ಸ್ ಸಂಕೀರ್ಣದಲ್ಲಿ ವಿರೋಧ ಪಕ್ಷವಾದ ಲೇಬರ್ ಪಾರ್ಟಿಯ ಹಿರಿಯ ಭಾರತೀಯ ಮೂಲದ ಸಂಸದ ವೀರೇಂದ್ರ ಶರ್ಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ರಿಟಿಷ್ ಸಂಸದರನ್ನುದ್ದೇಶಿಸಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷಗಳು ಮಾತನಾಡುವಾಗ ಸಂಸತ್ತಿನಲ್ಲಿ ಕಾರ್ಯನಿರ್ವಹಿಸುವ ಮೈಕ್ರೊಫೋನ್‌ಗಳನ್ನು ನಿಶ್ಯಬ್ದಗೊಳಿಸಲಾಗುತ್ತದೆ ಎಂದು ಆರೋಪಿಸಿರುವುದು ವಿವಾದದ ಬಿರುಗಾಳಿಯೆಬ್ಬಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್, "ವಿದೇಶಿ ಮಹಿಳೆಗೆ ಜನಿಸಿದ ಪುತ್ರನು ಎಂದಿಗೂ ದೇಶಪ್ರೇಮಿಯಾಗಿರುವುದಿಲ್ಲ ಎಂದು ಚಾಣಕ್ಯ ಹೇಳಿದ್ದು, ರಾಹುಲ್ ಗಾಂಧಿ ಅದನ್ನು ನಿರೂಪಿಸಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
"ನಿಮ್ಮ ತಾಯಿ ಇಟಲಿಯವರಾಗಿರುವುದರಿಂದ, ನೀವು ಭಾರತೀಯರಲ್ಲ ಎಂದು ನಾವು ಭಾವಿಸಿದ್ದೇವೆ" ಎಂದೂ ಅವರು ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿ ಆರೋಪಗಳ ಕುರಿತ ಪ್ರಶ್ನೆಗೆ ಉತ್ತರಿಸಿರುವ ಪ್ರಗ್ಯಾ ಠಾಕೂರ್, ಸಂಸತ್ತು ಕಾರ್ಯನಿರ್ವಹಿಸಲು ಕಾಂಗ್ರೆಸ್ ಅವಕಾಶ ನೀಡುತ್ತಿಲ್ಲ ಎಂದು ಪ್ರತಿಪಾದಿಸಿದ್ದಾರೆ. "ಸಂಸತ್ತು ಸುಗಮವಾಗಿ ನಡೆದರೆ ಇನ್ನೂ ಹೆಚ್ಚು ಕೆಲಸ ಮಾಡಬಹುದು. ಆದರೆ, ಹೆಚ್ಚು ಕೆಲಸ ನಡೆದರೆ ಕಾಂಗ್ರೆಸ್ ಪಕ್ಷ ಜೀವಂತ ಇರುವುದಿಲ್ಲ. ಅವರ ಅಸ್ತಿತ್ವ ಅಳಿವಿನಂಚಿನಲ್ಲಿದೆ. ಈಗ ಅವರ ಮನಸ್ಸೂ ಭ್ರಷ್ಟಗೊಳ್ಳತೊಡಗಿದೆ" ಎಂದು ಹರಿಹಾಯ್ದಿದ್ದಾರೆ.
"ನೀವು ಈ ದೇಶದ ನಾಯಕರಾಗಿದ್ದೀರಿ, ಈ ದೇಶದ ಜನರಿಂದ ಚುನಾಯಿತರಾಗಿದ್ದೀರಿ ಮತ್ತು ನೀವು ಸಾರ್ವಜನಿಕರನ್ನು ಅವಮಾನಿಸುತ್ತಿದ್ದೀರಿ. ನೀವು ವಿದೇಶದಲ್ಲಿ ಕುಳಿತಿರುವಾಗ ನಿಮಗೆ ಸಂಸತ್ತಿನಲ್ಲಿ ಮಾತಾಡಲು ಅವಕಾಶ ದೊರೆಯುತ್ತಿಲ್ಲ ಎಂದು ಹೇಳುತ್ತಿದ್ದೀರಿ. ಇದಕ್ಕಿಂತ ಅಪಮಾನಕರ ಮತ್ತೊಂದಿಲ್ಲ. ಅವರಿಗೆ ರಾಜಕೀಯದಲ್ಲಿರಲು ಅವಕಾಶ ನೀಡಬಾರದು ಮತ್ತು ದೇಶದಿಂದ ಹೊರದೂಡಬೇಕು" ಎಂದು ರಾಹುಲ್ ಗಾಂಧಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗ್ಯಾ ಠಾಕೂರ್ ಹೇಳಿಕೆಗೆ ತಿರುಗೇಟು ನೀಡಿರುವ ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ.ಕೆ.ಮಿಶ್ರಾ, ನೀವು ಮಾಲೇಗಾಂವ್ ಸ್ಫೋಟದ ಓರ್ವ ಆರೋಪಿ ಎಂಬ ಸಂಗತಿಯನ್ನು ನೆನಪಿಸಿದ್ದಾರೆ. ಸೆಪ್ಟೆಂಬರ್ 29, 2008ರಲ್ಲಿ ಮಹಾರಾಷ್ಟ್ರದ ಕೋಮು ಸೂಕ್ಷ್ಮ ಪ್ರದೇಶವಾದ ಮಾಲೇಗಾಂವ್‌ನ ಮಸೀದಿಯೊಂದರ ಎದುರು ಮೋಟರ್ ಸೈಕಲ್‌ವೊಂದಕ್ಕೆ ಕಟ್ಟಿದ್ದ ಸ್ಫೋಟಕ ಸಾಧನಗಳು ಸ್ಫೋಟಿಸಿದ್ದರಿಂದಾಗ ಆರು ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದರು. ಈ ಪ್ರಕರಣದಲ್ಲಿ ಪ್ರಗ್ಯಾ ಠಾಕೂರ್ 2017ರಂದು ಜಾಮೀನು ಪಡೆದು, ಜೈಲಿನಿಂದ ಹೊರ ಬಂದಿದ್ದಾರೆ.







