ಯಶ್ಪಾಲ್ ಸುವರ್ಣ ಸಹಿತ ಆರೋಪಿಗಳ ವಿರುದ್ಧ ಕ್ರಮಕ್ಕೆ ಉಡುಪಿ ಜಿಲ್ಲಾ ದಸಂಸ ಐಕ್ಯತಾ ಹೋರಾಟ ಸಮಿತಿ ಒತ್ತಾಯ
ಮಲ್ಪೆ ಸೊಸೈಟಿ ಮೆನೇಜರ್ ಆತ್ಮಹತ್ಯೆ ಪ್ರಕರಣ

ಉಡುಪಿ : ಮಲ್ಪೆ ಮಹಾಲಕ್ಷ್ಮೀ ಕೋಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಸುಬ್ಬಣ್ಣ ಆತ್ಮಹತ್ಯೆ ಪ್ರಕರಣದ ಆರೋಪಿ ಸೊಸೈಟಿಯ ಅಧ್ಯಕ್ಷ ಯಶ್ಪಾಲ್ ಸುವರ್ಣ ಸೇರಿದಂತೆ ಐವರ ವಿರುದ್ಧ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಹೋರಾಟ ಸಮಿತಿ ಆಗ್ರಹಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಮಾ.8ರಂದು ಸುಬ್ಬಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಅಲ್ಲಿ ದೊರೆತ ಡೆತ್ ನೋಟ್‌ನಲ್ಲಿ ಅವರು ಸಾವಿಗೆ ಕಾರಣ, ಬ್ಯಾಂಕ್ ಆಡಳಿತ ಮಂಡಳಿಯ ಒತ್ತಡದ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರಕರಣ ತನಿಖೆಯಲ್ಲಿ ಡೆತ್‌ನೋಟು ಮುಖ್ಯ ಪಾತ್ರ ವಹಿಸಲಿದ್ದು, ಅದೇ ಆಧಾರದಲ್ಲಿ ಮೃತರ ಸಹೋದರ ಸುರೇಶ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ಹಂತದಲ್ಲಿದೆ ಎಂದರು.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಎಲ್ಲ ಆರೋಪಿಗಳ ವಿರುದ್ಧ ಸೂಕ್ತ ಪೊಲೀಸ್ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಬೇಕು. ಈ ಪ್ರಕರಣದಲ್ಲಿ ರಾಜಕೀಯ ಪ್ರಭಾವ ಬಂದರೂ ಪೊಲೀಸರು ಸೊಪ್ಪು ಹಾಕದೆ ನ್ಯಾಯದ ಪಥದಲ್ಲಿ ತನಿಖೆ ನಡೆಸಬೇಕು. ಸಾಕ್ಷ್ಯನಾಶ ನಡೆಯುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ತೆಗೆದುಕೊಂಡು ನ್ಯಾಯ ಸಿಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮೃತ ಸುಬ್ಬಣ್ಣ ಕುಟುಂಬಕ್ಕೆ ಬ್ಯಾಂಕಿನಿಂದ ಸಿಗಬೇಕಾದ ಎಲ್ಲ ರೀತಿಯ ಪರಿಹಾರ ಕೂಡಲೇ ನೀಡಬೇಕು. ಮೃತರ ಪತ್ನಿ ಮತ್ತು ಮಗುವಿಗೆ ಆಸರೆಯಾಗಿ ಅನುಕಂಪದ ಆಧಾರದಲ್ಲಿ ಸೊಸೈಟಿಯಲ್ಲಿ ಉದ್ಯೋಗ ನೀಡಬೇಕು. ಸುಬ್ಬಣ್ಣ ಕುಟುಂಬಕ್ಕೆ ಕಾನೂನು ರೀತಿಯ ಸಿಗಬೇಕಾದ ಎಲ್ಲ ಸೌಲಭ್ಯವನ್ನು ಆಡಳಿತ ಮಂಡಳಿಯವರು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಸಮಿತಿಯ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಸೊಸೈಟಿಯ ಆಡಳಿತ ಮಂಡಳಿಯ ತೀವ್ರ ಒತ್ತಡವೇ ಸುಬ್ಬಣ್ಣ ಆತ್ಮಹತ್ಯೆಗೆ ಕಾರಣ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಬ್ಬಣ್ಣ ತನ್ನ ಸಹೋದರನ ಜೊತೆ ಎಲ್ಲ ನೋವುಗಳನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಿಸಿಟಿವಿ ಫುಟೇಜ್ ಹಾಗೂ ಫೋನ್ ಕರೆಗಳನ್ನು ಪರಿಶೀಲಿಸಿದರೆ ಎಲ್ಲ ಮಾಹಿತಿಗಳು ಸಿಗಬಹುದು. ಅಲ್ಲದೆ ಅವರ ಮನೆಗೂ ಹೋಗಿ ಅವರ ಪತ್ನಿಯನ್ನು ಬೆದರಿಸಲಾಗಿದೆ ಎಂದು ಆರೋಪಿಸಿದರು.
ಈ ಸೊಸೈಟಿಯಲ್ಲಿ ದಲಿತರಿಗೆ ಉದ್ಯೋಗ ಕೂಡ ಸರಿಯಾಗಿ ನೀಡುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ದಲಿತರಿಗೆ ಮೀಸಲಿರಿಸಿರುವ ನಿರ್ದೇಶಕ ಹುದ್ದೆಗೆ ನೇಮಕಾತಿ ಮಾಡಿಲ್ಲ ಎಂದು ದೂರಿದ ಅವರು, ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಲಾಗಿತ್ತು. ನಾವು ಒತ್ತಡ ಹಾಕದಿದ್ದರೆ ಎಫ್‌ಐಆರ್ ದಾಖಲಿಸುತ್ತಿರಲಿಲ್ಲ. ಈ ಪ್ರಕರಣದ ಬಗ್ಗೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಜಯನ್ ಮಲ್ಪೆ, ಶೇಖರ ಹೆಜಮಾಡಿ, ಹರೀಶ್ ಮಲ್ಪೆ, ವಾಸುದೇವ ಮುದೂರು, ಪರಮೇಶ್ವರ ಉಪ್ಪೂರು, ಶ್ಯಾಮ್ ಸುಂದರ್ ತೆಕ್ಕಟ್ಟೆ, ವಿಜಯ ಕೋಟ, ಆನಂದ ಬ್ರಹ್ಮಾವರ ಉಪಸ್ಥಿತರಿದ್ದರು.
‘ಯಶ್ಪಾಲ್ ಸುವರ್ಣರಿಂದ ದಬ್ಬಾಳಿಕೆ’
ಈ ಪ್ರಕರಣದ ಆರೋಪಿ ಯಶ್ಪಾಲ್ ಸುವರ್ಣ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಬೆತ್ತಲೆ ಪ್ರಕರಣದ ಆರೋಪಿಯಾಗಿದ್ದ ಇವರು, ಯಾವ ರೀತಿಯಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಪ್ರಕರಣಗಳು ಮರುಕಳಿಸಬಾರದು. ಮೃತ ಸುಬ್ಬಣ್ಣ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ದಲಿತ ಮುಖಂಡ ಶೇಖರ್ ಹೆಜಮಾಡಿ ಒತ್ತಾಯಿಸಿದರು.
ಬ್ಯಾಂಕ್ ಆಡಳಿತ ಮಂಡಳಿ ಸಾಲ ಕೊಡುತ್ತಾರೆ. ಬಳಿಕ ಅದರ ವಸೂಲಾತಿಗೆ ಮೆನೇಜರ್‌ಗಳ ಮೇಲೆ ಒತ್ತಡ ಹಾಕಿ ಬಲಿಪಶುಗಳನ್ನಾಗಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಕರಾವಳಿ ಕೂಡ ಬಿಹಾರ ಯುಪಿ ರಾಜ್ಯಗಳಂತೆ ಆಗುವ ಲಕ್ಷಣಗಳು ಕಂಡುಬರುತ್ತಿವೆ. ನಾವು ಹೋರಾಟ ಮಾಡದಿದ್ದರೆ ಮುಂದಿನ ಕರಾವಳಿ ಕೂಡ ಬಿಹಾರ ಯುಪಿಯಂತೆ ಆಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
"ಐಕ್ಯತಾ ಸಮಿತಿಯು ಈ ಪ್ರಕರಣದಲ್ಲಿ ಪೊಲೀಸರಿಗೆ ಸಮಾನಾಂತರವಾಗಿ ಸತ್ಯ ಶೋಧನೆ ನಡೆಸುತ್ತಿದೆ. ಇವರ ಸಾವಿಗೆ ಯಾರು ಕಾರಣ, ಆತ್ಮಹತ್ಯೆಗೆ ಮುನ್ನ ಬ್ಯಾಂಕ್ ಒಳಗಡೆ ನಡೆದ ಘಟನೆಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ಅದಕ್ಕೆ ಸಂಬಂಧಿಸಿದ ದಾಖಲೆ ಹಾಗೂ ಕೆಲವರ ಹೇಳಿಕೆ ಪಡೆದು ಮಾಹಿತಿ ಕೂಡ ಸಂಗ್ರಹಿಸಿದ್ದೇವೆ. ಹಾಗಾಗಿ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣವನ್ನು ಲಘುವಾಗಿ ಪರಿಗಣಿಸಿದರೆ ತೀವ್ರ ಹೋರಾಟ ಸಂಘಟಿಸಲಾಗುವುದು".
-ಮಂಜುನಾಥ್ ಗಿಳಿಯಾರು, ಜಿಲ್ಲಾ ಪ್ರಧಾನ ಸಂಚಾಲಕರು