ಸರಕಾರದಿಂದ ಶಿಕ್ಷಕರು-ಪೋಷಕರಲ್ಲಿ ಗೊಂದಲ ಸೃಷ್ಟಿ: ಎಐಡಿಎಸ್‌ಒ ಆರೋಪ

ಮಂಗಳೂರು: ಪ್ರಸಕ್ತ ಸಾಲಿನಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸರಕಾರದ ಅವೈಜ್ಞಾನಿಕ ನಿರ್ಧಾರದಿಂದ ಶಿಕ್ಷಕರು ಮತ್ತು ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಸರಕಾರವು ಶೈಕ್ಷಣಿಕ ನೀತಿಯ ಬಗ್ಗೆ ಪೂರ್ವಭಾವಿಯಾಗಿ ಚರ್ಚಿಸದೆ ನಿರಂಕುಶ ತೀರ್ಮಾನ ಕೈಗೊಂಡಿರುವುದು ಖಂಡನೀಯ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.
ಪ್ರಸ್ತುತ ಪಬ್ಲಿಕ್ ಪರೀಕ್ಷೆಯ ಕುರಿತು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಸರಕಾರ ಯಾವುದೇ ಚರ್ಚೆ ನಡೆಸಿಲ್ಲ. ಪಬ್ಲಿಕ್ ಪರೀಕ್ಷೆ ಕುರಿತು ಸಮಾಲೋಚನೆ ನಡೆಸದೆ ಕೈಗೊಂಡ ನಿರ್ಧಾರವನ್ನು ಹೈಕೋರ್ಟ್ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಆದೇಶೀಸಿದೆ. ಆದಾಗ್ಯೂ ವಿದ್ಯಾರ್ಥಿಗಳು, ಹೆತ್ತವರು ಗೊಂದಲಕ್ಕೆ ಸಿಲುಕಿದ್ದಾರೆ. ಶೈಕ್ಷಣಿಕ ನೀತಿಯನ್ನು ರೂಪಿಸುವ ಮೊದಲು ಸರಕಾರವು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಚರ್ಚಿಸಿ ನಂತರ ನೀತಿಯನ್ನು ಅನುಷ್ಠಾನ ಮಾಡಬೇಕಿತ್ತು. ಇದರಿಂದ ಹಲವು ಬಿಕ್ಕಟ್ಟನ್ನು ತಪ್ಪಿಸಬಹುದಾಗಿತ್ತು ಎಂದು ಅಜಯ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.