ಕ್ಯಾಲಿಗ್ರಫಿ ಕಲೆಗೆ ಭಾಷೆಯ ಗಡಿ ಮೀರಿ ಮಾನ್ಯತೆ ಇದೆ: ಬಾಲನ್ ನಂಬಿಯಾರ್
'ಮೀರಾಜ್ 2023' ಅಂತರ್ ರಾಷ್ಟ್ರೀಯ ಕ್ಯಾಲಿಗ್ರಫಿ ಪ್ರದರ್ಶನಕ್ಕೆ ತೆರೆ

ಬೆಂಗಳೂರು, ಮಾ.12: ಕ್ಯಾಲಿಗ್ರಫಿ ಕಲೆಯು ಚೀನಾದಲ್ಲಿ ಆರಂಭವಾಗಿದ್ದರೂ ಅರೇಬಿಕ್ ಭಾಷೆಯ ಆದಿಪತ್ಯವಿದೆ. ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಕ್ಯಾಲಿಗ್ರಫಿ ಕಲೆಗಳನ್ನು ಭಾಷೆಯ ಗಡಿಗಳನ್ನು ಮೀರಿ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಕಲಾವಿದ ಬಾಲನ್ ನಂಬಿಯಾರ್ ಹೇಳಿದರು.
ನಗರದ ಬೃಂಗ್ಟನ್ ರಸ್ತೆಯಲ್ಲಿರುವ ಪ್ರೆಸ್ಟಿಜ್ ಫಾಲ್ಕನ್ ಟವರ್ಸ್ ನ ದಿ ಫಾಲ್ಕನ್ ಡೆನ್ ಸಭಾಂಗಣದಲ್ಲಿ ಬ್ಯಾರೀಸ್ ಗ್ರೂಪ್ ಪ್ರಾಯೋಜಕತ್ವದಲ್ಲಿ ಇನ್ಸ್‍ಟಿಟ್ಯೂಟ್ ಆಫ್ ಇಂಡೊ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್(ಐಐಐಎಸಿ) ಸಂಘಟಿಸಿದ್ದ ಪ್ರಪ್ರಥಮ ಅಂತರ್ ರಾಷ್ಟ್ರೀಯ ಮೂರು ದಿನಗಳ ಕ್ಯಾಲಿಗ್ರಫಿ ಪ್ರದರ್ಶನ ‘ಮೀರಾಜ್-2023’ ಸಮಾರೋಪ ಸಮಾರಂಭದಲ್ಲಿಂದು ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೇಶ, ವಿದೇಶಗಳಿಂದ ಆಗಮಿಸಿದ್ದ ಕಲಾವಿದವರು ಅತ್ಯುತ್ತಮ ಕ್ಯಾಲಿಗ್ರಫಿ ಕಲೆಯನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಕ್ಯಾಲಿಗ್ರಫಿಯು ಒಂದು ಪರಿಪೂರ್ಣ ಕಲೆಯಾಗಿದೆ. ಇಲ್ಲಿ ಶ್ರದ್ಧೆ, ಭಕ್ತಿ, ಸಂಯಮ, ಆಲೋಚನೆ ಎಲ್ಲವೂ ಅಡಕವಾಗಿರುತ್ತದೆ ಎಂದು ಬಾಲನ್ ನಂಬಿಯಾರ್ ತಿಳಿಸಿದರು.
ಬ್ಯಾರೀಸ್ ಗ್ರೂಪ್‍ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ತಮ್ಮ ಆಸಕ್ತಿಯಿಂದ ಈ ಕಲೆಗೆ ಪ್ರೋತ್ಸಾಹ ನೀಡಲು ನಡೆಸಿರುವ ಪ್ರಯತ್ನ ಶ್ಲಾಘನೀಯವಾದದ್ದು. ಕೇವಲ ಅರೇಬಿಕ್ ಭಾಷೆಯಷ್ಟೇ ಅಲ್ಲ, ಭಾರತದ ಸ್ಥಳೀಯ ರಾಜ್ಯಗಳ ಭಾಷೆಗಳಲ್ಲಿನ ಕ್ಯಾಲಿಗ್ರಫಿ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಿರುವುದು ಮೆಚ್ಚುವಂತದ್ದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಎ.ಸಲೀಮ್ ಮಾತನಾಡಿ, ಕ್ಯಾಲಿಗ್ರಫಿ ಎಂದರೆ ಅರೇಬಿಕ್ ಭಾಷೆಯಲ್ಲಿ ಮಾತ್ರ ಇರುತ್ತದೆ ಎಂದು ಭಾವಿಸಿದ್ದೆ. ಸಾಮಾನ್ಯವಾಗಿ ಮುಸ್ಲಿಮರ ಮನೆಗಳಲ್ಲಿ, ಅಂಗಡಿಗಳಲ್ಲಿ ಕುರ್ ಆನ್‍ನ ಶ್ಲೋಕಗಳು ಇರುವಂತಹ ಕ್ಯಾಲಿಗ್ರಫಿ ಬರಹಗಳನ್ನು ಗೋಡೆಗಳ ಮೇಲೆ ಇರಿಸಿರುವುದನ್ನು ನೋಡುತ್ತೇವೆ ಎಂದರು.
ಅಲ್ಲದೆ, ತಾಜ್‍ಮಹಲ್, ಕುತುಬ್ ಮಿನಾರ್ ಸೇರಿದಂತೆ ಇನ್ನಿತರೆಡೆ ಕ್ಯಾಲಿಗ್ರಫಿ ಮೂಲಕ ಬರೆದಿರುವ ಬರಹಗಳನ್ನು ಕಂಡಿದ್ದೇವೆ. ಇವತ್ತು ಇಲ್ಲಿನ ಪ್ರದರ್ಶನದಲ್ಲಿ ದ.ರಾ.ಬೇಂದ್ರೆಯವರ ಪದ್ಯವನ್ನು ಕ್ಯಾಲಿಗ್ರಫಿ ಮೂಲಕ ಬರೆದಿರುವುದನ್ನು ನೋಡಿ ಆಶ್ಚರ್ಯವಾಯಿತು. ಅದೇ ರೀತಿ ನಾನು ಬಹಳಷ್ಟು ಮೆಚ್ಚುವಂತಹ ಕವಿ ಅಲ್ಲಮ ಇಕ್ಬಾಲ್ ಅವರ ಕವನಗಳನ್ನು ಕ್ಯಾಲಿಗ್ರಫಿಯಲ್ಲಿ ನೋಡುವ ಅವಕಾಶ ಸಿಕ್ಕಿದ್ದು ಅವಿಸ್ಮರಣೀಯ ಎಂದು ಅವರು ಹೇಳಿದರು.
ಕ್ಯಾಲಿಗ್ರಫಿ ಕಲೆಗೆ ಅದರಲ್ಲೂ ಸ್ಥಳೀಯ ಕಲಾವಿದರಿಗೆ ಅಂತರ್‍ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವ ಕೆಲಸವನ್ನು ಬ್ಯಾರೀಸ್ ಗ್ರೂಪ್ ಹಾಗೂ ಇನ್ಸ್‍ಟಿಟ್ಯೂಟ್ ಆಫ್ ಇಂಡೋ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್(ಐಐಐಎಸಿ) ಮಾಡಿದೆ. ಈ ಪ್ರದರ್ಶನದಿಂದಾಗಿ ಹಲವಾರು ಯುವಕರಿಗೆ ಕ್ಯಾಲಿಗ್ರಫಿಯತ್ತ ತಮ್ಮ ಗಮನ ಹರಿಸಲು ಪ್ರೋತ್ಸಾಹ ಸಿಕ್ಕಿದೆ ಎಂದು ಸಲೀಂ ಅಭಿಪ್ರಾಯಪಟ್ಟರು.
ಮತ್ತೊಬ್ಬ ಅತಿಥಿ ಫಿರೋಝ್ ಎಸ್ಟೇಟ್ ಮಾಲಕ ಫಿರೋಝ್ ಅಬ್ದುಲ್ಲಾ ಮಾತನಾಡಿ, ಮೀರಾಜ್ ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ಕಲಾವಿದವರಿಗೆ ಹಾಗೂ ಬ್ಯಾರೀಸ್ ಗ್ರೂಪ್ ಮತ್ತು ಇನ್ಸ್‍ಟಿಟ್ಯೂಟ್ ಆಫ್ ಇಂಡೋ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್‍ನ ಪ್ರಯತ್ನಗಳನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಸ್ವಾಗತ ಹಾಗೂ ವಂದನಾರ್ಪಣೆ ಮಾಡಿದ ಬ್ಯಾರೀಸ್ ಗ್ರೂಪ್ ನಿರ್ದೇಶಕ ಮಝರ್ ಸೈಯದ್ ಬ್ಯಾರಿ, ನನ್ನ ತಂದೆ ಸೈಯದ್ ಮುಹಮ್ಮದ್ ಬ್ಯಾರಿ ಅವರ ಆಸಕ್ತಿಯಿಂದಾಗಿ ಇದೇ ಮೊದಲ ಬಾರಿಗೆ ಅಂತರ್‍ರಾಷ್ಟ್ರೀಯ ಮಟ್ಟದ ಕ್ಯಾಲಿಗ್ರಫಿ ಪ್ರದರ್ಶನವನ್ನು ಏರ್ಪಡಿಸಲು ಸಾಧ್ಯವಾಯಿತು. ಇದಕ್ಕಾಗಿ, ಐಐಐಎಸಿಯ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ಹಾಗೂ ಬ್ಯಾರೀಸ್ ಗ್ರೂಪ್‍ನ ಎಲ್ಲ ಸದಸ್ಯರು, ಸಿಬ್ಬಂದಿಗಳು ಶ್ರಮಿಸಿದ್ದಾರೆ ಎಂದರು.
ಕಳೆದ ಮೂರು ತಿಂಗಳುಗಳಿಂದ ನಿರಂತರವಾಗಿ ಈ ಕಾರ್ಯಕ್ರಮದ ಆಯೋಜನೆಯ ಸಿದ್ಧತೆಗಳನ್ನು ಮಾಡಲಾಯಿತು. ಈ ಪ್ರದರ್ಶನ ವೀಕ್ಷಿಸಿದ ಪ್ರತಿಯೊಬ್ಬರೂ ಕಲಾವಿದರ ಪರಿಶ್ರಮ ಹಾಗೂ ಅವರ ಕಲೆಯನ್ನು ಶ್ಲಾಘಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಉನ್ನತಮಟ್ಟದಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲು ನಮಗೆ ಸ್ಫೂರ್ತಿ ಸಿಕ್ಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಯಾಲಿಗ್ರಫಿ ಕಲಾವಿದರಾದ ಎಂ.ಇಫ್ದಾಲುದ್ದೀನ್ ಕಿಲಿಕ್(ಟರ್ಕಿ), ಅಬ್ದುಲ್ಲಾ ಫತಾನಿ (ಸೌದಿ ಅರೇಬಿಯಾ), ಇಬ್ರಾಹೀಂ ಅಬ್ದುಲ್ಲಾ(ಸೌದಿ ಅರೇಬಿಯಾ), ತಗಲ್ಸೀರ್ ಹಸನ್(ಸುಡಾನ್), ನರ್ಜೆಸ್ ನೂರೇದ್ದೀನ್(ಯುಎಇ), ಮೊಹ್ಸಿನ್ ಘರೀಬ್(ಬಹ್ರೈನ್), ಅಲಿ ಅಲ್ ಜದ್(ಬಹ್ರೈನ್), ಸಾರಾ ಆಬಿದಿ(ಯುಎಇ), ಸರೀನಾ ಘಝೈ(ಇರಾನ್), ಫರೀದ್ ಅಬ್ದುಲ್ ರಹೀಮ್ ಅಲ್ ಅಲಿ(ಕುವೈತ್), ಸುರೇಶ್ ವಾಗ್ಮೋರೆ(ಬೆಂಗಳೂರು), ಪೂಸಾಪತಿ ಪರಮೇಶ್ವರ್ ರಾಜು(ಹೈದರಾಬಾದ್), ಅಚ್ಯುತ್ ಪಲವ್(ಮುಂಬೈ), ನಾರಾಯಣ ಭಟ್ಟಾತ್ರಿ ಸಿ.ಪಿ.(ಕೇರಳ) ಹಾಗೂ ವಿನೋದ್ ಕುಮಾರ್(ಚೆನ್ನೈ) ಅವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮುಹಮ್ಮದ್ ಫಸಲ್ ನೆರವೇರಿಸಿಕೊಟ್ಟರು. ಇನ್ಸ್‍ಟಿಟ್ಯೂಟ್ ಆಫ್ ಇಂಡೋ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್(ಐಐಐಎಸಿ)ನ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ಉಪಸ್ಥಿತರಿದ್ದರು.
ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅವರ ಸಹೋದರಿ ಮರ್ಯಮ್ ಅವರ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆರಂಭದಲ್ಲಿ ಮಝರ್ ಬ್ಯಾರಿ ಮನವಿಯಂತೆ ಸೌದಿ ಅರೇಬಿಯಾದ ಕಲಾವಿದ ಇಬ್ರಾಹೀಂ ಅಬ್ದುಲ್ಲಾ ದುಆ ಮಾಡಿದರು. ಅಲ್ಲದೆ, ವೇದಿಕೆಯಲ್ಲಿ ಮಾತನಾಡಿದ ಪ್ರತಿಯೊಬ್ಬ ಕಲಾವಿದನೂ ಸೈಯದ್ ಮುಹಮ್ಮದ್ ಬ್ಯಾರಿ ಅವರ ಕುಟುಂಬಕ್ಕೆ ಸಾಂತ್ವನದ ನುಡಿಗಳನ್ನು ಆಡಿದರು.
.jpeg)


