ನ್ಯಾಯಾಂಗ ಸುಧಾರಣೆ ವಿರೋಧಿಸಿ ಇಸ್ರೇಲ್ ನಲ್ಲಿ ಬೃಹತ್ ಪ್ರತಿಭಟನೆ

ಟೆಲ್ಅವೀವ್, ಮಾ.12: ನ್ಯಾಯಾಂಗದಲ್ಲಿ ಸುಧಾರಣೆ ಮಾಡುವ ಸರಕಾರದ ಯೋಜನೆಯನ್ನು ವಿರೋಧಿಸಿ ದೇಶದಾದ್ಯಂತ ಸತತ 10ನೇ ವಾರವೂ ಭಾರೀ ಪ್ರತಿಭಟನೆ ಮುಂದುವರಿದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು ಇದು ಇಸ್ರೇಲ್ ನ ಇತಿಹಾಸದಲ್ಲೇ ಅತ್ಯಂತ ಬೃಹತ್ ಪ್ರತಿಭಟನೆಯಾಗಿ ದಾಖಲಾಗಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ಕರಾವಳಿ ನಗರ ಟೆಲ್ಅವೀವ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸುಮಾರು 2 ಲಕ್ಷ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಹೊಸ ಸರಕಾರವು ತೆಗೆದುಕೊಳ್ಳಲು ಬಯಸುವ ಕ್ರಮಗಳು ಇಸ್ರೇಲಿ ಪ್ರಜಾಪ್ರಭುತ್ವಕ್ಕೆ ನಿಜವಾದ ಮತ್ತು ತಕ್ಷಣದ ಬೆದರಿಕೆಯನ್ನು ಪ್ರತಿನಿಧಿಸುತ್ತದೆ ಎಂದವರು ಘೋಷಣೆ ಕೂಗುತ್ತಿದ್ದರು. ಉತ್ತರದ ಹೈಫಾ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 50,000, ಬೀರ್ಶೆಬಾ ನಗರದಲ್ಲಿ ಸುಮಾರು 10,000 ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟೆಲ್ಅವೀವ್ನ ರಿಂಗ್ರೋಡ್ನಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ, ಸರಕಾರ ಸಂಸತ್ತಿನಲ್ಲಿ ಮಂಡಿಸಿರುವ ನ್ಯಾಯಾಂಗ ಸುಧಾರಣೆ ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ, ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರವಿವಾರದಿಂದ ಬುಧವಾರದವರೆಗೆ ಪ್ರತೀ ದಿನ ನಡೆಸುವುದಾಗಿ ಸಂಸತ್ತಿನ ಕಾನೂನು ಸ್ಥಾಯಿ ಸಮಿತಿ ಅಧ್ಯಕ್ಷ ಸಿಮ್ಚ ರೊಟ್ಮನ್ ಹೇಳಿದ್ದಾರೆ. ನ್ಯಾಯಾಂಗ ಸುಧಾರಣೆ ಕಾನೂನಿಗೆ ಪೂರಕವಾದ ಕೆಲವು ಮಸೂದೆಗಳಿಗೆ ಸಂಸತ್ತಿನ ಮಂಜೂರಾತಿ ಪಡೆಯಲು ಮೈತ್ರಿ ಸರಕಾರ ಸಿದ್ಧತೆ ನಡೆಸುತ್ತಿದೆ ಎಂದು ನ್ಯಾಯ ಸಚಿವ ಯಾರಿವ್ ಲೆವಿನ್ ಹೇಳಿದ್ದಾರೆ.
ಕಟ್ಟಾ ಬಲಪಂಥೀಯ ಹಾಗೂ ಕಟ್ಟಾ ಸಂಪ್ರದಾಯವಾದಿ ಯೆಹೂದಿ ಪಕ್ಷಗಳ ಬೆಂಬಲದಿಂದ ಮೈತ್ರಿ ಸರಕಾರ ರಚಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಡಳಿತ ನ್ಯಾಯಾಂಗ ಸುಧಾರಣೆ ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆಯುವ ವಿಶ್ವಾಸದಲ್ಲಿದೆ. ನ್ಯಾಯಾಂಗ ಸುಧಾರಣೆ ಕಾನೂನು ಜಾರಿಯಾದರೆ ನ್ಯಾಯಾಧೀಶರನ್ನು ನೇಮಕಗೊಳಿಸುವ ಸಮಿತಿಯಲ್ಲಿ ಸರಕಾರದ ಹಿಡಿತ ಹೆಚ್ಚಲಿದೆ ಮತ್ತು ಇಸ್ರೇಲ್ನ ಅರೆ-ಸಂವಿಧಾನ ಎಂದು ಕರೆಯಲಾಗುವ ಮೂಲಭೂತ ಕಾನೂನುಗಳಿಗೆ ಯಾವುದೇ ತಿದ್ದುಪಡಿಯನ್ನು ರದ್ದುಗೊಳಿಸುವ ಸುಪ್ರೀಂಕೋರ್ಟ್ ನ ಹಕ್ಕನ್ನು ನಿರಾಕರಿಸುತ್ತದೆ. ಅಲ್ಲದೆ ಸುಪ್ರೀಂಕೋರ್ಟ್ ತೀರ್ಪನ್ನು ಸಂಸತ್ತಿನಲ್ಲಿ 61 ಸದಸ್ಯರ ಸರಳ ಬಹುಮತದೊಂದಿಗೆ ರದ್ದುಗೊಳಿಸುವ ಅಧಿಕಾರವನ್ನೂ ಸರಕಾರಕ್ಕೆ ನೀಡುತ್ತದೆ.
ಈ ಮಧ್ಯೆ, ಮಸೂದೆಯು ಪ್ರಜಾಪ್ರಭುತ್ವದ ಮೂಲಾಧಾರಕ್ಕೆ ಒಂದು ಬೆದರಿಕೆಯಾಗಿರುವುದರಿಂದ ಅದನ್ನು ತಡೆಹಿಡಿಯಬೇಕು ಮತ್ತು ಇತರ ಪಕ್ಷಗಳೊಂದಿಗೆ ಚರ್ಚೆಗೆ ಮುಂದಾಗುವಂತೆ ಔಪಚಾರಿಕ ಅಧಿಕಾರ ಹೊಂದಿರುವ ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರ್ಝಾಗ್ ಮೈತ್ರಿ ಸರಕಾರಕ್ಕೆ ಕರೆ ನೀಡಿದ್ದಾರೆ.
ಮೀಸಲು ಪಡೆಯಿಂದಲೂ ವಿರೋಧ
ಇಸ್ರೇಲ್ ರಕ್ಷಣಾ ಪಡೆಯ ಬೆನ್ನೆಲುಬು ಎನಿಸಿರುವ ಬಲಿಷ್ಟ ಮೀಸಲು ಪಡೆಯ ಸಿಬಂದಿಗಳೂ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿರುವುದರಿಂದ ಸರಕಾರ ಮುಜುಗುರಕ್ಕೆ ಒಳಗಾಗಿದೆ. ಸರಕಾರದ ನಿರ್ಧಾರವನ್ನು ವಿರೋಧಿಸಿ ಕಳೆದ ವಾರ ಇಸ್ರೇಲ್ ವಾಯುಪಡೆಯ ಮೀಸಲು ಪೈಲಟ್ಗಳು ತರಬೇತಿಗೆ ಹಾಜರಾಗಲು ನಿರಾಕರಿಸಿದ್ದರು. ಆದರೆ ಆ ಬಳಿಕ ಅವರ ಮನ ಒಲಿಸುವಲ್ಲಿ ರಕ್ಷಣಾ ಪಡೆಯ ಮುಖ್ಯಸ್ಥರು ಸಫಲವಾದರು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
ಗುರುವಾರ ನಡೆದ ಪ್ರತಿಭಟನೆ ಸಂದರ್ಭ, ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿದೇಶಕ್ಕೆ ತೆರಳುವುದಕ್ಕೆ ಪ್ರತಿಭಟನಾಕಾರರು ಅಡ್ಡಿಮಾಡಿದ್ದರು. ಬಳಿಕ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಿ, ನೆತನ್ಯಾಹು ರೋಮ್ಗೆ ತೆರಳಲು ಅನುವು ಮಾಡಿಕೊಟ್ಟರು ಎಂದು ವರದಿಯಾಗಿದೆ.