ರಾಣಿ ಅಬ್ಬಕ್ಕನವರ ಹೋರಾಟದ ಬದುಕು ದೇಶದ ಹೆಣ್ಣು ಮಕ್ಕಳಿಗೆ ಸದಾ ಸ್ಪೂರ್ತಿ: ಸಚಿವ ಕೆ.ಗೋಪಾಲಯ್ಯ

ಬೆಂಗಳೂರು, ಮಾ.12: ಅಂದಿನ ಕಾಲಘಟ್ಟದಲ್ಲಿ ರಾಣಿ ಅಬ್ಬಕ್ಕನವರು ವೀರಾವೇಶದಿಂದ ಹೋರಾಡಿ ಪೊರ್ಚುಗೀಸರ ಸೊಕ್ಕನ್ನು ಅಡಗಿಸಿ ಯುದ್ಧದಲ್ಲಿ ಗೆಲುವು ಸಾಧಿಸಿ ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ರಾಣಿ ಅಬ್ಬಕ್ಕನವರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ರವಿವಾರ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ರಾಣಿ ಅಬ್ಬಕ್ಕ ಪ್ರತಿಷ್ಠಾನ ಹಾಗೂ ಆಶಾ ಪ್ರಕಾಶ್ ಶೆಟ್ಟಿ ವೇದಿಕೆ ವತಿಯಿಂದ ನಡೆದ ರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ರಾಣಿ ಅಬ್ಬಕ್ಕನವರ ಕೊಡುಗೆ ಅಪಾರವಾದದ್ದು ಅವರ ಹೋರಾಟದ ಹಾದಿ, ದೇಶಭಕ್ತಿಯನ್ನು ಇಂದಿನ ಯುವ ಜನತೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ರಾಣಿ ಅಬ್ಬಕ್ಕನವರು ನಮ್ಮೆಲ್ಲರಿಗೂ ಮಾದರಿ: ರಾಣಿ ಅಬ್ಬಕ್ಕ ಸ್ವಾತಂತ್ರ್ಯ ಪೂರ್ವದಲ್ಲಿ ಪೊರ್ಚುಗೀಸರ ವಿರುದ್ಧ ಹೋರಾಡಿದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ರಾಣಿ ಅಬ್ಬಕ್ಕನವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರು ತಿಳಿಸಿದರು.
ರಾಣಿ ಅಬ್ಬಕ್ಕ ಪ್ರಶಸ್ತಿ ಪಡೆದು ಅವರು ಮಾತನಾಡಿದರು. ದಕ್ಷಿಣ ಕನ್ನಡದ ಉಲ್ಲಾಳದ ರಾಣಿಯಾಗಿ ಪೊಚುಗೀಸರ ವಿರುದ್ಧ ಹೋರಾಡಿ ಸ್ವತಂತ್ರವನ್ನು ತಂದು ಕೊಡುವ ನಿಟ್ಟಿನಲ್ಲಿ ಬಹಳ ಹೋರಾಟ ಮಾಡಿ ಮಹಿಳೆಯರ ಅಚ್ಚುಮೆಚ್ಚಿನ ನಾಯಕಿಯಾಗಿ ಬೆಳೆದವರು ಎಂದು ಹೇಳಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕ್ರೀಡಾಂಗಣಕ್ಕೆ ರಾಣಿ ಅಬ್ಬಕ್ಕನವರ ಹೆಸರು ಇಟ್ಟಿರುವುದು ಬಹಳ ಸಂತೋಷವಾಗಿದೆ ಇದರ ಜೊತೆಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ರಾಣಿ ಅಬ್ಬಕ್ಕನವರ ಪ್ರತಿಮೆ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ ಎಂದು ಹೇಳಿದರು.
ಈ ವೇದಿಕೆಯಲ್ಲಿ ನನಗೆ ರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕೆ ಬಹಳ ಸಂತಸವಾಗಿದೆ ತಮ್ಮೆಲ್ಲರಿಗೂ ಪ್ರೀತಿ ವಿಶ್ವಾಸಕ್ಕೆ ಅಭಾರಿಯಾಗಿರುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಉಪಮೇಯರ್ ಎಸ್.ಹರೀಶ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಎ.ಆರ್.ಜಿ ಗ್ರೂಪ್ ನ ಚೇರ್ ಮನ್ ಪ್ರಕಾಶ್ ಶೆಟ್ಟಿ, ಯುನಿವರ್ಸಲ್ ಸಮೂಹ ಸಂಸ್ಥೆ ಚೇರ್ ಮನ್ ಉಪೇಂದ್ರ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.








