ಶ್ರೀಲಂಕಾವನ್ನು ರೋಚಕವಾಗಿ ಸೋಲಿಸಿದ ನ್ಯೂಝಿಲ್ಯಾಂಡ್: ಭಾರತ WTC ಫೈನಲ್ ಗೆ ಅರ್ಹತೆ

ಹೊಸದಿಲ್ಲಿ: ಕ್ರೈಸ್ಟ್‌ಚರ್ಚ್‌ನಲ್ಲಿ ಸೋಮವಾರ ನಡೆದ ರೋಚಕ ಮೊದಲ ಟೆಸ್ಟ್‌ನಲ್ಲಿ ನ್ಯೂಝಿಲ್ಯಾಂಡ್ ತಂಡ ಶ್ರೀಲಂಕಾವನ್ನು ಸೋಲಿಸಿದ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಲಂಡನ್‌ನ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.
WTC ಫೈನಲ್ ಜೂನ್ 7 ರಿಂದ 11 ರವರೆಗೆ ನಡೆಯಲಿದೆ.
ಅಹಮದಾಬಾದ್‌ನಲ್ಲಿ ಈಗ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವು ಭಾರತಕ್ಕೆ ಜಯವನ್ನು ನಿರಾಕರಿಸಿದರೆ ಹಾಗೂ ಎರಡು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ತಂಡ ನ್ಯೂಝಿಲ್ಯಾಂಡ್ ವಿರುದ್ದ 2-0 ಅಂತರದಿಂದ ಕ್ಲೀನ್ ಸ್ವಿಪ್ ಸಾಧಿಸಿದ್ದರೆ WTC ಫೈನಲ್‌ಗೆ ಅರ್ಹತೆ ಪಡೆಯುತ್ತಿತ್ತು.
ಇದೀಗ ಭಾರತ ಸತತ 2ನೇ ಬಾರಿ WTC ಫೈನಲ್‌ಗೆ ಪ್ರವೇಶಿಸಿದೆ. 2021 ರಲ್ಲಿ ಮೊದಲ ಆವೃತ್ತಿಯ WTC ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ಭಾರತವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತ್ತು.
ಇಂದೋರ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಭಾರತವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದ ನಂತರ ಆಸ್ಟ್ರೇಲಿಯವು ಡಬ್ಲ್ಯುಟಿಸಿಯಲ್ಲಿ ಫೈನಲ್ ಸ್ಥಾನವನ್ನು ಪಡೆದುಕೊಂಡ ಮೊದಲ ತಂಡವಾಗಿದೆ, ಆತಿಥೇಯ ಭಾರತವು ನ್ಯೂಝಿಲ್ಯಾಂಡ್ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ನಲ್ಲಿನ ಫಲಿತಾಂಶಕ್ಕಾಗಿ ಕಾಯುತ್ತಿತ್ತು.