ರೌಡಿ ಶೀಟರ್ ಫೈಟರ್ ರವಿ ಯಾರೆಂದು ಮೋದಿಗೆ ಗೊತ್ತಿರಲಿಲ್ಲ: ಫೋಟೊ ವೈರಲ್ ಬಗ್ಗೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ
ಬೆಂಗಳೂರು, ಮಾ.13: ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಕೋರುವವರ ಪಟ್ಟಿಯಲ್ಲಿ ರೌಡಿಶೀಟರ್ ಫೈಟರ್ ರವಿ ಹೆಸರು ಹೇಗೆ ಬಂತು ಎಂದು ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೈಟರ್ ರವಿ ಯಾರೆಂದು ಪ್ರಧಾನಿಗೆ ಗೊತ್ತಿರಲಿಲ್ಲ. ಸ್ವಾಗತ ಕೋರುವವರ ಪಟ್ಟಿಯನ್ನು ನರೇಂದ್ರ ಮೋದಿ ಮೊದಲೆ ಗಮನಿಸಿರಲಿಲ್ಲ. ಈ ಅಚಾತುರ್ಯಕ್ಕೆ ಅವರು ಜವಾಬ್ದಾರರಲ್ಲ. ಪ್ರಧಾನಿಗೆ ಫೈಟರ್ ರವಿ ಸ್ವಾಗತ ಕೋರಿರುವುದು ಲೋಪವಾಗಿದೆ ಎಂದರು.
ಸ್ವಾಗತ ಕೋರುವವರ ಪಟ್ಟಿಯಲ್ಲಿ ಫೈಟರ್ ರವಿ ಹೆಸರು ಹೇಗೆ ಬಂತು ಎಂದು ಪರಿಶೀಲಿಸುತ್ತೇವೆ. ಅವರು ಅಲ್ಲಿ ಯಾಕಾಗಿ ಬಂದಿದ್ದರು. ಯಾವ ಉದ್ದೇಶದಿಂದ ಬಂದಿದ್ದರು ಎನ್ನುವುದನ್ನು ಗಮನಿಸುತ್ತೇವೆ. ಈ ಬಗ್ಗೆ ಕಾಂಗ್ರೆಸ್‍ನವರು ಟ್ರೋಲ್ ಮಾಡುವ ಅಗತ್ಯವಿಲ್ಲ ಎಂದು ಶೋಭಾ ಕರಂದ್ಲಾಜೆ ಕರಂದ್ಲಾಜೆ ಹೇಳಿದರು.
ಸೋಮಣ್ಣ ಬಿಜೆಪಿಯ ಉನ್ನತ ನಾಯಕ: ಬಿಜೆಪಿಯ ಹಿರಿಯರಿಗೆ ಸಿಗದ ಸ್ಥಾನಮಾನ ಸಚಿವ ವಿ.ಸೋಮಣ್ಣಗೆ ಸಿಕ್ಕಿದೆ. ಅವರು ಬಿಜೆಪಿಯ ಉನ್ನತ ನಾಯಕರು. ಉಪ ಚುನಾವಣೆಯಲ್ಲಿ ಸೋತರೂ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದೆವು. ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂದು ಬೇಸರವಾಗೋದು ಬೇಡ. ಅವರಿಗೆ ಬೇಸರ ಇದೆ ಅನ್ನೋದು ಊಹಾಪೋಹ ಎಂದು ಅವರು ತಿಳಿಸಿದರು.