'ಅಝಾನ್' ವಿರೋಧಿ ಹೇಳಿಕೆ ಸಮರ್ಥಿಸಿಕೊಂಡ ಶಾಸಕ ಈಶ್ವರಪ್ಪ

ಮಂಗಳೂರು, ಮಾ.13: ಚುನಾವಣೆಯಲ್ಲಿ ಹಿನ್ನೆಡೆಯಾಗುತ್ತದೆ ಎಂದು ನಮ್ಮ ತತ್ವ ಸಿದ್ಧಾಂತವನ್ನು ಪಕ್ಕಕ್ಕೆ ಸರಿಸಿ ರಾಜಕಾರಣ ಮಾಡುವುದಿಲ್ಲ. ಎಲ್ಲಾ ಮುಸಲ್ಮಾನರ ವೋಟು ಬೇಡ ಎಂದಿಲ್ಲ. ರಾಷ್ಟ್ರೀಯವಾದಿ ಮುಸಲ್ಮಾನರು ನಮ್ಮೊಂದಿಗೆ ಇದ್ದಾರೆ ಎಂದು ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರವಿವಾರ ಸಮಾರಂಭದಲ್ಲಿ ಅಝಾನ್ ಬಗ್ಗೆ ಮಾತನಾಡಿದ್ದು ನಿಜ. ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಝಾನ್‌ನಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಮೂರು ನಾಲ್ಕು ಮೈಕ್ ಹಾಕಿ ಕೂಗಿದರೆ ಸಮಸ್ಯೆಯಾಗುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವೂ ಹೌದು. ಜನಸಾಮಾನ್ಯರ ಅಭಿಪ್ರಾಯವೂ ಅಲ್ಲ. ಧಾರ್ಮಿಕ ನಿಂದನೆ ಅಲ್ಲ ಎಂದು ಸಮರ್ಥಿಸಿಕೊಂಡರು.
ವಿಧಾನ ಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಯನ್ನು ಜನರ ಮುಟ್ಟಿಸುವ ಉದ್ದೇಶದಿಂದ ಆರಂಭಗೊಂಡ ವಿಜಯ ಸಂಕಲ್ಪ ಯಾತ್ರೆ 13ನೇ ದಿನಕ್ಕೆ ಕಾಲಿರಿಸಿದ್ದು, ಚಾಮರಾಜನಗರ, ಮೈಸೂರು, ನಗರ, ಮೈಸೂರು ಗ್ರಾಮಾಂತರ,ಮಂಡ್ಯ, ಹಾಸನ, ಕೊಡಗು ಜಿಲ್ಲೆಯಲ್ಲಿ ಪ್ರವಾಸ ಮುಗಿಸಿ ದ.ಕ. ಜಿಲ್ಲೆಗೆ ತಲುಪಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಯನ್ನು ಜನರು ಮೆಚ್ಚಿದ್ದಾರೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಮೂಡಾದ ಅಧ್ಯಕ್ಷ ರವಿಶಂಕರ ಮಿಜಾರು, ಪಕ್ಷದ ಧುರೀಣರಾದ ದತ್ತಾತ್ರೇಯ ಶಿವಮೊಗ್ಗ, ಸುಧೀರ್ ಶೆಟ್ಟಿ ಕಣ್ಣೂರು, ವಿಜಯಕುಮಾರ್ ಶೆಟ್ಟ, ದೇವದಾಸ ಶೆಟ್ಟಿ ಬಂಟ್ವಾಳ ಉಪಸ್ಥಿತರಿದ್ದರು.