ಆಸ್ಕರ್ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್'ನಲ್ಲಿ ಕಾಣಿಸಿಕೊಂಡ ದಂಪತಿ ಇನ್ನೂ ಸಾಕ್ಷ್ಯಚಿತ್ರ ನೋಡಿಲ್ಲ

ಹೊಸದಿಲ್ಲಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿರುವ ಭಾರತದ ಕಿರು ಸಾಕ್ಷ್ಯಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' (Elephant Whisperers) ಇದರಲ್ಲಿ ತಮಿಳುನಾಡಿನ ಮುದುಮಲೈನಲ್ಲಿ ತನ್ನ ಹಿಂಡಿನಿಂದ ಪ್ರತ್ಯೇಕಗೊಂಡ ಮರಿಯಾನೆಯನ್ನು ಸಲಹುವ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಇನ್ನೂ ಈ ಸಾಕ್ಷ್ಯಚಿತ್ರ ವೀಕ್ಷಿಸಿಲ್ಲ.
ಸಾಕ್ಷ್ಯಚಿತ್ರದಲ್ಲಿ ಕಾಣಿಸಿರುವ ಬೊಮ್ಮನ್ (54) ಪ್ರತಿಕ್ರಿಯಿಸಿ, ಆನೆಗಳನ್ನು ನೋಡಿಕೊಳ್ಳುವುದರಲ್ಲೇ ಸಮಯ ಕಳೆಯುವುದರಿಂದ ಸಾಕ್ಷ್ಯಚಿತ್ರ ವೀಕ್ಷಿಸಲು ಸಮಯ ದೊರಕಿಲ್ಲ ಎನ್ನುತ್ತಾರೆ. "ನನಗೆ ಈಗಲೂ ಇದರ ಬಗ್ಗೆ (ಆಸ್ಕರ್) ಏನೂ ಗೊತ್ತಿಲ್ಲ," ಎಂದು ಧರ್ಮಪುರಿಯಲ್ಲಿರುವ ಬೊಮ್ಮನ್ ಹೇಳುತ್ತಾರೆ.
"ಆದರೆ ಇದು ತುಂಬಾ ಮುಖ್ಯ ಹಾಗೂ ಈ ಸಾಕ್ಷ್ಯಚಿತ್ರ ಭಾರತಕ್ಕೆ ಬಹಳಷ್ಟು ಹೆಮ್ಮೆ ತಂದಿದೆ ಎಂದು ಎಲ್ಲರೂ ಹೇಳುವುದು ಕೇಳಿಸಿಕೊಂಡಿದ್ದೇನೆ," ಎಂದು ಬೊಮ್ಮನ್ ಹೇಳುತ್ತಾರೆ.
ಆನೆಗಳ ರಕ್ಷಣೆ ಕಾರ್ಯವಿದ್ದರೆ ಮಾತ್ರ ಬೊಮ್ಮನ್ ಮುದುಮಲೈ ಬಿಟ್ಟು ತೆರಳುತ್ತಾರೆ ಎಂದು hindustantimes ತಿಳಿಸಿದ್ದಾರೆ.
ಈ 40 ನಿಮಿಷ ಅವಧಿಯ ಸಾಕ್ಷ್ಯಚಿತ್ರವನ್ನು ನೀಲಗಿರಿ ಜಿಲ್ಲೆಯ ಮುದುಮಲೈ ಅರಣ್ಯದಲ್ಲಿ ಚಿತ್ರೀಕರಿಸಲಾಗಿದೆ. ಬೊಮ್ಮನ್ ದಂಪತಿ ಮೊದಲು ಮರಿಯಾನೆ ರಾಘುವಿನ ಆರೈಕೆ ಮಾಡುವುದು ಹಾಗೂ ನಂತರ ಮೂರು ತಿಂಗಳು ಪ್ರಾಯದ ಅಮ್ಮು ಆನೆಯ ಆರೈಕೆ ಮಾಡುವುದನ್ನು ತೋರಿಸಲಾಗಿದೆ.
ತಮಿಳುನಾಡು ಅರಣ್ಯ ಇಲಾಖೆಯ ಉದ್ಯೋಗಿಯಾಗಿರುವ ಬೊಮ್ಮನ್ ಮತ್ತವರ ಪತ್ನಿ ಬೆಳ್ಳಿ, ಸಾಕ್ಷ್ಯಚಿತ್ರದಲ್ಲಿ ಕಾಣಿಸಿರುವ ಆನೆಮರಿಗಳು ತಮ್ಮ ಮಕ್ಕಳಂತೆ ಎಂದು ಹೇಳುತ್ತಾರೆ.
"ರಾಘು ಮತ್ತು ಅಮ್ಮುವಿನ ಆರೈಕೆಯನ್ನು ಬೇರೊಬ್ಬರಿಗೆ ವಹಿಸಿದ್ದರಿಂದ ಅವುಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಇದು ಸರ್ಕಾರಿ ನೌಕರಿ. ನನಗೆ ವಾಪಸ್ ಕೊಡಿ ಎಂದು ಹೇಳಲಾಗದು," ಎಂದು ಬೊಮ್ಮನ್ ಹೇಳುತ್ತಾರೆ.
ಇಲ್ಲಿಯ ತನಕ ಸುಮಾರು 84 ಆನೆಗಳ ಆರೈಕೆ ಮಾಡಿರುವುದಾಗಿ ಬೊಮ್ಮನ್ ಹೇಳುತ್ತಾರೆ. "ಸಾಕ್ಷ್ಯಚಿತ್ರಕ್ಕಾಗಿ ಆಗೀಗ ಚಿತ್ರೀಕರಣವನ್ನು ಸಹಜವಾಗಿ ನಡೆಸಲಾಗುತ್ತಿತ್ತು., ಸುಮಾರು ಐದು ಜನರು ಬಂದು ನಾವು ಕೆಲಸ ಮಾಡುತ್ತಿದ್ದಾಗ ಚಿತ್ರೀಕರಣ ಮಾಡಿ ವಾಪಸಾಗಿ ಮತ್ತೆ ಬರುತ್ತಿದ್ದರು," ಎಂದು ಬೊಮ್ಮನ್ ಹೇಳುತ್ತಾರೆ.
ಈ ಸಾಕ್ಷ್ಯಚಿತ್ರ ಚಿತ್ರೀಕರಣದ ಸಂದರ್ಭದಲ್ಲಿಯೇ ದಂಪತಿ ತಮ್ಮ ಮಗನನ್ನು ಕಳೆದುಕೊಂಡಿದ್ದರು. ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಜೊತೆ ಅವರು ಇನ್ನಷ್ಟೇ ಮಾತನಾಡಬೇಕಿದೆ.
ಆಸ್ಕರ್ ಪ್ರಶಸ್ತಿ ಎಂದರೇನು ಎಂದು ತಿಳಿದಿರದೇ ಇದ್ದರೂ ಪ್ರಶಸ್ತಿ ದೊರಕಿದ್ದು ಖುಷಿಯಾಗಿದೆ ಎಂದು ಬೆಳ್ಳಿ ಹೇಳುತ್ತಾರೆ.