ಅತ್ಯುತ್ತಮ ಘನ ತ್ಯಾಜ್ಯ ನಿರ್ವಹಣೆಗಾಗಿ ಸಂಜೀವಿನಿ ಒಕ್ಕೂಟಕ್ಕೆ ರಾಜ್ಯ ಪುರಸ್ಕಾರ

ಉಡುಪಿ : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ವತಿಯಿಂದ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 80 ಬಡಗಬೆಟ್ಟು, ನೇಸರ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟಕ್ಕೆ ಉತ್ತಮವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಗ್ರಾಪಂ ಮಟ್ಟದ ಒಕ್ಕೂಟ ಎಂದು ಗುರುತಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಶಸ್ತಿ ಪ್ರಧಾನ ಮಾಡಿದರು.
ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ಮಹಿಳೆಯರಿಂದ ಪೂರ್ಣ ಕುಂಬ ಸ್ವಾಗತ, ಕರಾವಳಿ ಗಂಡು ಕಲೆ ಎಂದೇ ಪ್ರಸಿದ್ಧಿಯಾದ ಯಕ್ಷಗಾನದ ವೇಷದ ಮಾನಿನಿಯರು, ಹುಲಿ ವೇಷದ ನಾರಿಯರು, ಸ್ತ್ರೀಯರ ಚಂಡೆ ಬಳಗ, ವೈಶಿಷ್ಟ್ಯ ತುಂಬಿದ ಉಡುಪಿ ಸೀರೆ, ನೆಲಗಡಲೆ ಚಿಕ್ಕಿಯ ಸವಿ ಹೀಗೆ ರಾಜ್ಯ ಮಟ್ಟದ ಕಾರ್ಯಕ್ರಮದ ಮೆರುಗನ್ನು ಉಡುಪಿ ಜಿಲ್ಲೆ ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಐ.ಟಿ.ಬಿ.ಟಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಅಶ್ವಥ್ ನಾರಾಯಣ್, ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವ ಕುಮಾರ್, ಅಭಿಯಾನ ನಿರ್ದೆಶಕ ಡಾ.ರಾಗ ಪ್ರಿಯ ಮೊದಲಾದವರು ಉಪಸ್ಥಿತರಿದ್ದರು.