ನಿವೇಶನ ಮಂಜೂರಾಗಿದ್ದರೂ ಮನೆ ನಿರ್ಮಿಸಲು ಅವಕಾಶವಿಲ್ಲ: ಗುರುಪುರ ಗ್ರಾಪಂ ವ್ಯಾಪ್ತಿಯ ಮಠದಗುಡ್ಡ ಸಂತ್ರಸ್ತರ ಅಳಲು

ಮಂಗಳೂರು: ಮೂರು ವರ್ಷಗಳ ಹಿಂದೆ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಮಠದಗುಡ್ಡೆ ಸೈಟ್ ಪ್ರದೇಶದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿರುವ 10 ಮನೆಮಂದಿಗೆ ನಿವೇಶನ ಮಂಜೂರಾಗಿದ್ದರೂ ಮನೆ ನಿರ್ಮಿಸಲು ಅವಕಾಶವಿಲ್ಲದಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜನಪ್ರತಿನಿಧಿಗಳ ಸೂಚನೆಯ ಹೊರತಾಗಿಯೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಮನೆಮಂದಿ ಇಂದಿಗೂ ನಿರ್ವಸತಿಗರಾಗಿದ್ದಾರೆ. ಸತತ ಪ್ರಯತ್ನದ ಫಲವಾಗಿ ಸಂತ್ರಸ್ತರಿಗೆ ಮಂಜೂರಾದ ಜಾಗದಲ್ಲಿ ಸಮತಟ್ಟು ಕಾರ್ಯ ನಡೆದಿದೆ. ಆದರೂ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂತ್ರಸ್ತರು ಗುರುಪುರ ಗ್ರಾಪಂ ಆಡಳಿತಕ್ಕೆ ದೂರು ನೀಡಿದ್ದಾರೆ.
ಈವರೆಗೂ ಸರಕಾರಿ ಇಲಾಖೆಗಳು ಮತ್ತು ಜನಪ್ರತಿನಿಧಿಗಳ ಭೇಟಿಯಲ್ಲೇ ಕಾಲ ಕಳೆದಿರುವ ಸಂತ್ರಸ್ತರು ಸೋಮವಾರ ಗುರುಪುರ ಗ್ರಾಪಂ ಕಚೇರಿಗೆ ತೆರಳಿ ಮನೆ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಗ್ರಾಪಂ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿಗೆ ಲಿಖಿತ ಮನವಿ ಮಾಡಿಕೊಂಡರು.
ಮೂಳೂರು ಮಠದಗುಡ್ಡೆಯ ಸರ್ವೇ ನಂಬ್ರ 102ರಲ್ಲಿ 44 ಸೆಂಟ್ಸ್ ಜಮೀನಿನಲ್ಲಿ ಸಂತ್ರಸ್ತರಿಗೆ 10 ಮನೆ ನಿರ್ಮಿಸಲು ಕಂದಾಯ ಇಲಾಖೆ ಅನುಮತಿ ನೀಡಿತ್ತು. ಜಾಗ ಸಮತಟ್ಟುಗೊಳಿಸುವ ಸಂದರ್ಭ ಸ್ಥಳೀಯರು ರಾಜ್ಯ ಕಾರ್ಯದರ್ಶಿಗೆ ಪತ್ರ ಬರೆದು ಆಕ್ಷೇಪ ಸಲ್ಲಿಸಿ ನೀರಿನ ಒರತೆ ಇರುವ ಜಾಗದಲ್ಲಿ ಮನೆ ನಿರ್ಮಿಸಿದರೆ ಮೇಲ್ಗಡೆ ಇರುವ ಮನೆಗಳಿಗೆ ಅಪಾಯವಿದೆ ಎಂದಿದ್ದರು.
ಅದರಂತೆ ಮನೆ ನಿರ್ಮಿಸುವ ಮುನ್ನ ಜಮೀನಿನ ಸುತ್ತಮುತ್ತಲ ಪ್ರದೇಶದಲ್ಲಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸರಕಾರ ಸೂಚಿಸಿತ್ತು. ಜಂಟಿ ಸಮೀಕ್ಷೆ ನಡೆದು ಕೆಲವು ದಿನಗಳು ಕಳೆದರೂ ಗಣಿ ಇಲಾಖೆಯು ಗ್ರಾಪಂ ಕಚೇರಿಗೆ ಸಮೀಕ್ಷಾ ವರದಿ ರವಾನಿಸದೆ ವಿಳಂಬ ನೀತಿ ಅನುಸರಿಸಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಮುಹಮ್ಮದ್ ಯಾನೆ ಮೋನು, ಇಸ್ಮಾಯಿಲ್ ಜಿಎಚ್, ಜಯಮ್ಮ, ಅಪೋಲಿನ್ ಡಿಸೋಜ, ಅಶ್ರಾಫ್, ಸಕೀನಾ, ನೆಫಿಸಾ, ತಾಹಿರಾ, ಲತಾ, ಚಂದ್ರಾವತಿ ಮತ್ತಿತರ ಸಂತ್ರಸ್ತರು ಸೋಮವಾರ ಗ್ರಾಪಂ ಕಚೇರಿ ಮುಂದೆ ಅಸಮಾ ಧಾನ ವ್ಯಕ್ತಪಡಿಸಿ ಧರಣಿ ನಡೆಸಲು ಮುಂದಾದರು. ಅಷ್ಟರಲ್ಲಿ ಗ್ರಾಪಂ ಅಧ್ಯಕ್ಷರು ಗಣಿ ಇಲಾಖೆಗೆ ಕರೆ ಮಾಡಿ ವರದಿ ಕಳುಹಿಸುವಂತೆ ಸೂಚಿಸಿದ ಬಳಿಕ ವರದಿಯನ್ನು ಗ್ರಾಪಂಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.
ಗಣಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯ ವರದಿಯಂತೆ ಜಿಪಂ ಇಂಜಿನಿಯರ್, ವಾರ್ಡ್ ಸದಸ್ಯರು ಹಾಗೂ ಗ್ರಾಪಂ ಪಿಡಿಒ ಅವರೊಂದಿಗೆ ಮಾತುಕತೆ ನಡೆಸಿ ಸಮತಟ್ಟು ಗೊಳಿಸಲಾದ ಜಾಗದಲ್ಲಿ ಶೀಘ್ರ ಮನೆ ನಿರ್ಮಿಸಲು ಕ್ರಮ ಕೈಗೊಳ್ಳುವೆ ಎಂದು ಗ್ರಾಪಂ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಸಂತ್ರಸ್ತರಿಗೆ ಭರವಸೆ ನೀಡಿದರು.