ಉಡುಪಿ: ಜಂತುಹುಳ ನಿವಾರಣಾ ಕಾರ್ಯಕ್ರಮ ಉದ್ಘಾಟನೆ

ಉಡುಪಿ, ಮಾ.13: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇನರ ಸಹಯೋಗದಲ್ಲಿ ಸೋಮವಾರ ಉಡುಪಿಯ ಕಾಡಬೆಟ್ಟುನ ಟಿ.ಎ.ಪೈ. ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಜಂತುಹುಳ ನಿವಾರಣೆಯ ಆಲ್ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ.ಲತಾ ನಾಯಕ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮರಾವ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಟಿ.ಎ.ಪೈ. ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಹೆಚ್.ಆರ್.ಶೆಣ್ಯೆ, ಮುಖ್ಯೋಪಾಧ್ಯಾಯಿನಿ ಸುಲೋಚನಾ ಮತ್ತಿತರರು ಉಪಸ್ಥಿತರಿದ್ದರು.
ಮಾ.25ರವರೆಗೆ ಮಾತ್ರೆ ನೀಡಿಕೆ: ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ಅಂಗವಾಗಿ ಜಿಲ್ಲೆಯ ಒಂದರಿಂದ 19 ವರ್ಷದೊಳಗಿನ 2,73,548 ಮಕ್ಕಳಿಗೆ ಉಚಿತವಾಗಿ ಜಂತುಹುಳ ನಿವಾರಣಾ ಮಾತ್ರೆಯನ್ನು ನೀಡಲಾ ಗುತ್ತದೆ. ಇಂದು ಬಿಟ್ಟು ಹೋದ ಮಕ್ಕಳಿಗೆ ಮಾ.14ರಿಂದ 25ರವರೆಗೆ ಮಾತ್ರೆಯನ್ನು ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಂತುಹುಳುಗಳು 1 ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳು ವುದರಿಂದ ಆ ಮಕ್ಕಳಲ್ಲಿ ಹೊಟ್ಟೆ ನೋವು, ಬೇಧಿ, ಹಸಿವಿಲ್ಲದಿರುವುದು ಹಾಗೂ ಸುಸ್ತಿನ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಅವರಲ್ಲಿ ರಕ್ತಹೀನತೆ, ಪೌಷ್ಠಿಕಾಹಾರದ ಕೊರತೆ ಉಂಟಾಗಲಿದ್ದು, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ತೊಂದರೆ ಯಾಗುತ್ತದೆ. ಈ ಮಾತ್ರೆ ನೀಡುವುದರಿಂದ ಜಂತುಹುಳಗಳು ನಾಶವಾಗುತ್ತವೆ.
ನೈರ್ಮಲ್ಯತೆಯ ಕೊರತೆ ಹಾಗೂ ವೈಯುಕ್ತಿಕ ಶುಚಿತ್ವದ ಕೊರತೆಯಿಂದ ಮತ್ತು ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಜಂತುಹುಳು ಬಾಧೆ ಕಂಡುಬರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಕೈಯ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ ಶುಚಿಯಾಗಿಡಬೇಕು. ಊಟ/ತಿಂಡಿ ಮಾಡುವ ಮೊದಲು ಹಾಗೂ ಶೌಚಾಲಯವನ್ನು ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ಶುದ್ಧೀಕರಿಸಿದ ನೀರನ್ನೇ ಕುಡಿಯಬೇಕು. ಹಣ್ಣು, ಹಂಪಲು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಶುದ್ಧ ನೀರಿನಿಂದ ತೊಳೆಯಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಅವರು ತಿಳಿಸಿದ್ದಾರೆ.