ಪಚ್ಚನಾಡಿ ಬೆಂಕಿ ದುರಂತ: ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ಕಾಂಗ್ರೆಸ್ ಒತ್ತಾಯ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಟ್ಟ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಸತತವಾಗಿ ಸಂಭವಿಸುವ ಬೆಂಕಿ ಅನಾಹುತಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣವಾಗಿದೆ. ಹಾಗಾಗಿ ಮೇಯರ್, ಸಂಸದರು, ಶಾಸಕರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಮನಪಾ ಪ್ರತಿಪಕ್ಷ ನಾಯಕ ನವೀನ್ ಡಿಸೋಜ ಒತ್ತಾಯಿಸಿದ್ದಾರೆ.
ಬೆಂಕಿ ಅನಾಹುತದಿಂದ ಪಚ್ಚನಾಡಿ ಸುತ್ತಮುತ್ತಲಿನ ಪ್ರದೇಶಗಳಾದ ತಿರುವೈಲು, ವಾಮಂಜೂರು, ಕುಡುಪು, ಬೋಂದೇಲ್, ಪದವಿನಂಗಡಿ, ಕಾವೂರು ಮತ್ತು ಯೆಯ್ಯಾಡಿ ಪ್ರದೇಶಗಳ ಸಾರ್ವಜನಿಕರಿಗಲ್ಲದೆ ಸ್ಥಳೀಯ ವಿಕಲರಚೇತನರ ಶಾಲೆ, ಸರಕಾರಿ, ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಸಣ್ಣ ಮಕ್ಕಳು, ಹಿರಿಯರು, ಗರ್ಭಿಣಿಯರು ಹಾಗೂ ಅನಾರೋಗ್ಯ ಪೀಡಿತರಿಗೆ, ಅಸ್ತಮಾ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಇದಕ್ಕೆ ಮಹಾನಗರ ಪಾಲಿಕೆಯ, ಜಿಲ್ಲಾಡಳಿತದ ವೈಫಲ್ಯವೇ ಕಾರಣವಾಗಿದೆ. ಹಾಗಾಗಿ ಶಾಸಕರರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.