ಉದ್ಯಮದ ಅಗತ್ಯತೆಯನ್ನು ಅರಿತು ಪೂರ್ಣ ಮನಸ್ಸಿನಿಂದ ಕಲಿಯಬೇಕು: ಮುರಳೀ ಅಯ್ಯರ್

ಮಂಗಳೂರು, ಮಾ.13: ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉದ್ಯೋಗಾವಕಾಶವನ್ನು ಹೆಚ್ಚಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು ಕಲಿತುಕೊಳ್ಳುವುದು ಅಗತ್ಯ. ಯಾವುದೇ ವಿಚಾರವನ್ನಾಗಲಿ ಇಷ್ಟಪಟ್ಟು ಕಲಿತರೆ ಅದು ಸುಲಭವಾಗಿ ಕರಗತಗೊಳ್ಳುತ್ತದೆ ಎಂದು ವಿಪ್ಲಿ ಇಂಡಿಯಾ ಎಲ್‌ಎಲ್‌ಪಿ ಸಂಸ್ಥೆಯ ಮಾಜಿ ಪಾಲುದಾರ ಮುರಳೀ ಅಯ್ಯರ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಡೇಟಾಸೈನ್ಸ್ ವಿಭಾಗದ ವತಿಯಿಂದ ಮಾ.13 ರಿಂದ 17ರವರೆಗೆ ಹಮ್ಮಿಕೊಂಡಿರುವ ‘ಡೇಟಾಸೈನ್ಸ್ ಇಂಡಸ್ಟ್ರೀ ಎಕೆಡೆಮಿಯ ಪರ್ಸ್ಪೆಕ್ಟಿವ್ ಎಂಬ ವಿಷಯದ ಬಗೆಗೆ 5 ದಿನಗಳ ಶಿಕ್ಷಕರ ಜ್ಞಾನವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಕೆಳವಾರು ದಶಕಗಳ ಉದ್ಯೋಗ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಾಗೂ ಪ್ರಾಧ್ಯಾಪಕರೊಂದಿಗೆ ಹಂಚಿಕೊಳ್ಳಲು ನಿಟ್ಟೆ ತಾಂತ್ರಿಕ ಕಾಲೇಜು ಒಂದು ಉತ್ತಮ ವೇದಿಕೆಯಾಗಿದೆ. ಜ್ಞಾನವನ್ನು ಹಂಚಿಕೊಂಡಷ್ಟು ಹೆಚ್ಚು ಬೆಳೆಯುತ್ತದೆ ಎಂಬ ಮಾತು ನಾವೆಂದಿಗೂ ಮರೆಯಬಾರದು ಎಂದರು.
ಗೌರವ ಅತಿಥಿ ವಿಪ್ಲಿ ಇಂಡಿಯಾ ಎಲ್‌ಎಲ್‌ಪಿ ಸಂಸ್ಥೆಯ ನಿರ್ದೇಶಕ ಸುಮಂತ್ ಪಡಿವಾಳ್ ಮಾತನಾಡಿ, ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಡೇಟಾಸೈನ್ಸ್ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ಯಾವುದೇ ತಂತ್ರಜ್ಞಾನದ ಬೆಳವಣಿಗೆಗೆ ಮೂಲಭೂತ ಪರಿಕಲ್ಪನೆ ಅಗತ್ಯ ಎಂದು ನುಡಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್ ಚಿಪ್ಳೂಣ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯಲ್ಲಿ ಕೆಳೆದ ಸಾಲಿನಲ್ಲಿ ಆರಂಭವಾಗಿರುವ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಡೇಟಾಸೈನ್ಸ್ ಬಿಟೆಕ್ ಪದವಿ ಕೋರ್ಸ್‌ನ ಪಠ್ಯಕ್ರಮವನ್ನು ತಯಾರಿಸುವಲ್ಲಿ ವಿಪ್ಲಿ ಸಂಸ್ಥೆ ಸಹಕಾರ ನೀಡಿದೆ. ಪಠ್ಯಕ್ರಮದಲ್ಲಿ ಉದ್ಯಮದ ಬಗೆಗಿನ ಪ್ರಾಯೋಗಿಕ ಅಂಶಗಳನ್ನು ಹೆಚ್ಚಿಸುವುದು ಅಗತ್ಯವಿದೆ. ಇಂತಹ ಜ್ಞಾನವೃದ್ಧಿ ಕಾರ್ಯಕ್ರಮ ಗಳು ಉದ್ಯಮ ಹಾಗೂ ಕಾಲೇಜು ಶಿಕ್ಷಣದ ನಡುವಿನ ಅಂತರವನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಡೇಟಾಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ವೇಣುಗೋಪಾಲ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಅಂಕಿತಾ ಶೆಟ್ಟಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಜ್ವಲ್ ಹೆಗ್ಡೆ ವಂದಿಸಿದರು.