ನಿಷ್ಪ್ರಯೋಜಕ ಶಾಸಕರ ಕಾರ್ಯವೈಖರಿಯಿಂದ ಜನತೆ ಬೇಸತ್ತಿದ್ದಾರೆ: ಕೆಪಿಸಿಸಿ ವಕ್ತಾರ ಅಮೃತ ಶೆಣೈ
"ಬಂಟ್ವಾಳ ಪ್ರಜಾಧ್ವನಿ'' ಯಾತ್ರೆಯ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳದ ಅಭಿವೃದ್ಧಿಯ ಹರಿಕಾರ, ಕಳಂಕ, ಭ್ರಷ್ಟಾಚಾರ ರಹಿತ ಶುದ್ಧ ರಾಜಕಾರಣಿ ಮಾಜಿ ಸಚಿವ, ರಮಾನಾಥ ರೈಗಳನ್ನು ಅಪಪ್ರಚಾರಕ್ಕೆ ಬಲಿಯಾಗಿ ಸೋಲಿಸಿದ ಜನತೆ ಇದೀಗ ನಿಷ್ಪ್ರಯೋಜಕ ಶಾಸಕರ ಕಾರ್ಯವೈಖರಿ ಯಿಂದ ಬೇಸತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮೃತ ಶೆಣೈ ಹೇಳಿದರು.
ರಮಾನಾಥ ರೈ ನೇತೃತ್ವದ "ಬಂಟ್ವಾಳ ಪ್ರಜಾಧ್ವನಿ'' ಯಾತ್ರೆಯ ಮೂರನೇ ದಿನದ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಸಂಜೆ ವಾಮದಪದವು-ಬಸ್ತಿಕೋಡಿ ಜಂಕ್ಷನ್ನಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಟ್ವಾಳದ ಶಾಸಕರ ಹೆಸರೇ ಪರಿಚಯಕ್ಕೆ ಬಂದಿಲ್ಲ. ಮತ್ತೆಲ್ಲಿ ಅಭಿವೃದ್ದಿ ಪಟ್ಟಿ ಮಾಡೋದು? ಜನಸಂಖ್ಯೆ ಜಾಸ್ತಿಯಾಗಲು ಕಾಂಗ್ರೆಸ್ ಸರಕಾರ ಸರಿಯಾಗಿ ಕರೆಂಟ್ ಕೊಟ್ಟಿಲ್ಲ ಎಂಬ ನಾಲಾಯಕ್ ಹೇಳಿಕೆ ನೀಡುವ ಬಿಜೆಪಿ ನಾಯಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ರೆಸಾರ್ಟ್ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದ ಆಡಳಿತಾರೂಢ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಮೋದಿಯ ಡಿಜಿಟಲ್ ಇಂಡಿಯಾ ಕ್ಯಾಶ್ ಲೆಸ್ ಇಂಡಿಯಾ ದ ನಡುವೆಯೇ ಬಿಜೆಪಿ ನಾಯಕರಲ್ಲಿ ಕೋಟಿ ಕೋಟಿ ಕಂತೆಗಟ್ಟಲೆ ನಗದು ಹಣ ಸಿಗುತ್ತಿದೆ ಎಂದಾದರೆ ಇದರ ಬಗ್ಗೆ ಜನ ಆಲೋಚಿಸಬೇಕಿದೆ. ಮನುಷ್ಯ ಸಾವಿನಲ್ಲೂ ಲಾಭ-ನಷ್ಟದ ಲೆಕ್ಕ ಹಾಕುವ ಏಕೈಕ ಪಕ್ಷ ಇದ್ರೆ ಅದು ಬಿಜೆಪಿ ಮಾತ್ರ. ದೇವರು ಮೆಚ್ಚುವ ಅತೀ ಹೆಚ್ವು ಧಾರ್ಮಿಕ ಕೈಂಕರ್ಯಗಳನ್ನು ಮಾಡಿದವರು ರೈಗಳು ಹಾಗೂ ಕಾಂಗ್ರೆಸ್ಸಿಗರು ಆದರೆ ಅವರನ್ನು ಹಿಂದೂ ವಿರೋಧಿಗಳು ಎಂದು ಹೇಳುವ ಬಿಜೆಪಿಗರು ಮರ್ಯಾದೆ ಮೀರಿ ಮಾಡಬಾರದ್ದೆಲ್ಲವನ್ನೂ ಮಾಡಿ ಹಿಂದೂ ರಕ್ಷಕರು ಎಂದು ಪೋಸು ಕೊಡುತ್ತಿರುವುದು ಈ ನಾಡಿನ ಬಹುದೊಡ್ಡ ದುರಂತವಾಗಿದೆ ಎಂದ ಅಮೃತ ಶೆಣೈ ಅಧಿಕಾರಕ್ಕಾಗಿ ಎಂತಹ ಹೇಯ ಮಟ್ಟಕ್ಕೆ ಇಳಿಯಲೂ ಹೇಸದವರು ಬಿಜೆಪಿಗರು. ಯಾರ ಕೊಲೆಯನ್ನೂ ಮಾಡಿ ಗೊಂದಲ ಸೃಷ್ಟಿಸಿ ಮತವಾಗಿ ಪರಿವರ್ತಿಸುವ ಪ್ರಯತ್ನ ಮಾಡ್ತಾರೆ. ಆದ್ದರಿಂದ ಕಾಂಗ್ರೆಸ್ಸಿಗರು ಬಹಳಷ್ಟು ಜಾಗರೂಕರಾಗಿ ರಬೇಕು ಎಂದು ಸಲಹೆ ನೀಡಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ರಮಾನಾಥ ರೈ ಮಾಡುವಷ್ಟು ಕೆಲಸ ಮಾಡುವ ಜನಪ್ರತಿನಿಧಿ ಇನ್ನೊಬ್ಬರಿಲ್ಲ. ವಿರೋಧ ಪಕ್ಷದಲ್ಲಿದ್ದರೂ, ಶಾಸಕ ಅಲ್ಲದಿದ್ದರೂ ಅವರ ಮನೆಯಲ್ಲಿ ಇಂದಿಗೂ ಅಹವಾಲು ಮಂಡಿಸಲು ಬರುವ ಸಾರ್ವಜನಿಕರಷ್ಟು ಯಾವುದೇ ಶಾಸಕರ ಮನೆ-ಕಚೇರಿಯಲ್ಲೂ ಇರಲಿಕ್ಕಿಲ್ಲ. ಅಭಿವೃದ್ದಿಯಲ್ಲಿ ರೈ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಅಪಪ್ರಚಾರ, ಸುಳ್ಳಿನಿಂದ ಮಾತ್ರ ಸೋಲಾಗಿದೆ ಎಂದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ನಾನು ಸೋತದ್ದಕ್ಕೆ ಬೇಜಾರಿಲ್ಲ. ಆದರೆ ಅಪಪ್ರಚಾರದಿಂದ ಜನರ ದಾರಿ ತಪ್ಪಿಸಿದ್ದಕ್ಕೆ ಬೇಸರವಿದೆ. ಆರೋಪ ಇಲ್ಲದೆ ಅಭಿವೃದ್ದಿ ಮಾಡಿದ್ದೇನೆ. ಹತ್ಯಾ ಆರೋಪಿಗಳು ಬಿಜೆಪಿ ಕಾರ್ಯಕರ್ತರು ಎಂಬುದನ್ನು ಪೊಲೀಸ್ ಕಡತ ಸಾಬೀತುಪಡಿಸಿದರೂ ಅದನ್ನು ಇನ್ನೊಬ್ಬರ ತಲೆಗೆ ಕಟ್ಟುವ ಕೆಟ್ಟ ಸಂಪ್ರದಾಯದ ಮೂಲಕ ರಾಜಕೀಯ ಲಾಭ ಪಡೆಯುವ ಸನ್ನಿವೇಶ ನಿರ್ಮಾಣ ಮಾಡ್ತಾರೆ. ಈ ಬಗ್ಗೆ ಕಾಂಗ್ರೆಸಿಗರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ,ಅಮ್ಮು ರೈ ಹರ್ಕಾಡಿ, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಸುದರ್ಶನ್ ಜೈನ್, ಲೋಲಾಕ್ಷ ಶೆಟ್ಟಿ, ಸಂಜೀವ ಪೂಜಾರಿ, ಅರ್ಶದ್ ಸರವು, ರಾಜೇಶ್ ರೋಡ್ರಿಗಸ್, ಪಿ ಎ ರಹೀಂ ಬಿ ಸಿ ರೋಡು, ವೆಂಕಪ್ಪ ಪೂಜಾರಿ, ಸಿದ್ದೀಕ್ ಸರವು, ಸಿರಾಜ್ ಮದಕ, ಸ್ಟೀವನ್ ಡಿ ಸೋಜ, ಬಿ ವಾಸು ಪೂಜಾರಿ, ಉಮೇಶ್ ಬೋಳಂತೂರು, ಸುರೇಶ್ ಜೋರಾ, ಜಗದೀಶ್ ಕೊಯಿಲ, ಸದಾಶಿವ ಬಂಗೇರ, ಭಾರತಿ ರಾಜೇಂದ್ರ ಮೊದಲಾದವರು ಭಾಗವಹಿಸಿದ್ದರು.
ಚೆನ್ನೈತ್ತೋಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿ, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.