ನೈಜೀರಿಯಾ: 16 ಜನರನ್ನು ಗುಂಡಿಕ್ಕಿ ಹತ್ಯೆಗೈದ ಬಂದೂಕುಧಾರಿಗಳು

ಅಬುಜಾ, ಮಾ.13: ವಾಯವ್ಯ ನೈಜೀರಿಯಾದಲ್ಲಿ ಬಂದೂಕುಧಾರಿಗಳು ಕನಿಷ್ಟ 16 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಸರಕಾರದ ಮೂಲಗಳನ್ನು ಉಲ್ಲೇಖಿಸಿ ‘ದಿ ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.
ವಾಯವ್ಯ ನೈಜೀರಿಯಾದ ಕಡುನಾ ರಾಜ್ಯದ ಝಂಗಾನ್ ಕತಾಫ್ ಎಂಬಲ್ಲಿ ಬಂದೂಕುಧಾರಿಗಳ ತಂಡವು ಸ್ಥಳೀಯಾಡಳಿತದ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಚೆಕ್ಪೋಸ್ಟ್ನಲ್ಲಿ ಪೊಲಿಸರೊಂದಿಗೆ ಘರ್ಷಣೆ ನಡೆಸಿದ ಬಳಿಕ ಮನಬಂದಂತೆ ಗುಂಡು ಹಾರಿಸಿದಾಗ ಕನಿಷ್ಟ 16 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಬಳಿಕ ಈ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಫುಲಾನಿ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಂದೂಕುಧಾರಿಗಳು ಈ ದಾಳಿ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಪ್ರದೇಶದಲ್ಲಿರುವ ಸ್ಥಳೀಯ ರೈತರು ಹಾಗೂ ಫುಲಾನಿಗಳ ಮಧ್ಯೆ ಆಗಾಗ ಜಮೀನು ಮತ್ತು ನೀರಿನ ವಿವಾದಕ್ಕೆ ಘರ್ಷಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
Next Story





