ಬೆಂಗಳೂರು: RTE ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟ ಖಾಸಗಿ ಶಾಲೆ

ಬೆಂಗಳೂರು, ಮಾ.13: ನಗರದ ಖಾಸಗಿ ಶಾಲೆಯೊಂದರಲ್ಲಿ ಆರ್‍ಟಿಇ ಮೂಲಕ ಪ್ರವೇಶಾತಿಯನ್ನು ಪಡೆದ ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿ ಮಾಡದ ಕಾರಣ ಆಡಳಿತ ಮಂಡಳಿಯು ಪರೀಕ್ಷೆಯಿಂದ ಹೊರಗಿಟ್ಟ ಪ್ರಕರಣವು ನಡೆದಿರುವುದು ವರದಿಯಾಗಿದೆ.
ಇಲ್ಲಿನ ಉಲ್ಲಾಳ ಮುಖ್ಯರಸ್ತೆಯಲ್ಲಿರುವ ಎಚ್‍ಎಂಆರ್ ಶಾಲೆಯಲ್ಲಿ ಏಳು ವಿದ್ಯಾರ್ಥಿಗಳು ಆರ್‍ಟಿಇ ಮೂಲಕ ಪ್ರವೇಶವನ್ನು ಪಡೆದಿದ್ದರು. ಈಗ ಪರೀಕ್ಷೆಗಳು ನಡೆಯುತಿದ್ದು, ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಿದೆ. ಆದರೆ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ತಡೆದಿದ್ದಾರೆ. ಹೀಗಾಗಿ ಪೋಷಕರು ಶಾಲೆ ಬಳಿ ಗಲಾಟೆ ಮಾಡಿದ ಬಳಿಕ 11 ಗಂಟೆಗೆ ಆರ್‍ಟಿಇ ವಿದ್ಯಾರ್ಥಿಗಳಿಗೆ ಪರೀಕ್ಷ ಪತ್ರವನ್ನು ಕೊಡಲಾಗಿದೆ. ಒಂದೂವರೆ ತಾಸಿನ ಪರೀಕ್ಷೆಗೆ ಕೇವಲ 30 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
ಆರ್‍ಟಿಇ ಅಡಿಯಲ್ಲಿ ಪ್ರವೇಶವನ್ನು ಪಡೆದವರಿಗೆ ಯಾವುದೇ ರೀತಿಯಲ್ಲಿ ಶುಲ್ಕವನ್ನು ವಿಧಿಸಬಾರದು ಎಂಬ ನಿಯಮವಿದೆ. ಆದರೆ ಆಡಳಿತ ಮಂಡಳಿಯು ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿದೆ. ಪರೀಕ್ಷೆ ಹತ್ತಿರಕ್ಕೆ ಬಂದಾಗ ಶುಲ್ಕವನ್ನು ಪಾವತಿ ಮಾಡುವಂತೆ ಒತ್ತಾಯಿಸಲಾಗುತ್ತದೆ ಎಂದು ಪೋಷಕರು ಆರೋಪಿಸಿದ್ದಾರೆ.





