ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ವ್ಯಕ್ತಿಗೆ ಜಾಮೀನು ಸಿಕ್ಕರೂ ಜೈಲುಪಾಲು; ಕಾರಣವೇನು ಗೊತ್ತೇ?

ಮುಂಬೈ: ಏರ್ ಇಂಡಿಯಾ (Air India) ವಿಮಾನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ಹಾಗೂ ಧೂಮಪಾನ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿ ಜಾಮೀನಿಗೆ 25,000 ರೂ. ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮುಂಬೈನ ನ್ಯಾಯಾಲಯವು ಆತನನ್ನು ಜೈಲಿಗೆ ಕಳುಹಿಸಿದೆ.
ನ್ಯಾಯಾಲಯವು ಆರೋಪಿ ರತ್ನಾಕರ್ ದ್ವಿವೇದಿಗೆ ನಗದು ಜಾಮೀನು ಮಂಜೂರು ಮಾಡಿದೆ, ಆದರೆ ಆತ ಮೊತ್ತವನ್ನು ಪಾವತಿಸಲು ನಿರಾಕರಿಸಿದ್ದು ತಾನು ಜೈಲಿಗೆ ಹೋಗಲು ಸಿದ್ಧ ಎಂದು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಮಾರ್ಚ್ 10 ರಂದು ಏರ್ ಇಂಡಿಯಾದ ಲಂಡನ್-ಮುಂಬೈ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಲ್ಲದೆ ಅಶಿಸ್ತಿನ ರೀತಿಯಲ್ಲಿ ವರ್ತಿಸಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಜೀವನ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಅಡಿಯಲ್ಲಿ ರತ್ನಾಕರನ ಮೇಲೆ ಆರೋಪ ಹೊರಿಸಲಾಯಿತು.
ಐಪಿಸಿಯ ಸೆಕ್ಷನ್ 336 ರ ಅಡಿಯಲ್ಲಿ ಪಾವತಿಸಬೇಕಾದ ದಂಡವು 250 ರೂ. ಆಗಿದೆ ಎಂಬುದನ್ನು ನಾನು ಆನ್‌ಲೈನ್‌ನಲ್ಲಿ ಓದಿದ್ದೇನೆ, ಅದನ್ನು ಪಾವತಿಸಲು ಸಿದ್ಧನಿದ್ದೇನೆ ಆದರೆ ಜಾಮೀನು ಮೊತ್ತ ಪಾವತಿಸಲು ನನ್ನಿಂದ ಅಸಾಧ್ಯ ಎಂದು ಆರೋಪಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸೋಮವಾರ ಆತನನ್ನು ಜೈಲಿಗೆ ಕಳುಹಿಸಿದೆ.
ಇದನ್ನೂ ಓದಿ: RRR ಚಿತ್ರದ ನಟ ಎಂದು ಎಡ್ವರ್ಡ್ ಸ್ನೋಡೆನ್ ಫೋಟೋ ಬಳಸಿದ 'ಟೈಮ್ಸ್ ನೌ': ಸಾಮಾಜಿಕ ಜಾಲತಾಣದಲ್ಲಿ ಟೀಕೆ