ಲಂಡನ್ ನಲ್ಲಿ ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ: ರಾಹುಲ್ ಗಾಂಧಿ

ಹೊಸದಿಲ್ಲಿ: ಲಂಡನ್ ನಲ್ಲಿ ತಾನು ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ರಾಹುಲ್ ಕ್ಷಮೆಯಾಚಿಸಬೇಕೆಂದು ಬಜೆಟ್ ಅಧಿವೇಶನದ 2ನೇ ದಿನವಾದ ಮಂಗಳವಾರ ಆಡಳಿತಾರೂಢ ಬಿಜೆಪಿ ಸದಸ್ಯರು ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದರು.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ವಾಗ್ದಾಳಿಯನ್ನು ಹೆಚ್ಚಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, ಸದಸ್ಯರೊಬ್ಬರು ವಿದೇಶಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡುವುದನ್ನು ಸಂಸತ್ತು ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕಾವೇರಿದ ಮಾತಿನ ಚಕಮಕಿ ಎರಡನೇ ದಿನವೂ ಮುಂದುವರಿದಿದ್ದರಿಂದ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪವು ನಂತರ ಮುಂದೂಡಲ್ಪಟ್ಟವು.
ಎಲ್ಲಾ ಪಕ್ಷಗಳ ಸಂಸದರು ರಾಹುಲ್ ಅವರ ಹೇಳಿಕೆಯನ್ನು ಖಂಡಿಸಬೇಕು ಎಂದು ಬಿಜೆಪಿ ಬೇಡಿಕೆ ಇಟ್ಟಿದೆ. ಆದರೆ, ಆಡಳಿತ ಪಕ್ಷದ ಆರೋಪಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ನಾಶ ಮಾಡುವವರು ಅದನ್ನು ಉಳಿಸುವ ಮಾತನಾಡುತ್ತಿದ್ದಾರೆ ಎಂದಿದೆ.
ಇದನ್ನೂ ಓದಿ: ನಾನೇನು ಮಾಡಲಿ, ಕೆಲಸ ಬಿಡಲೇ: ಪೂಜಾರ ಬೌಲಿಂಗ್ ಚಿತ್ರ ಟ್ವೀಟಿಸಿ ಅಶ್ವಿನ್ ಪ್ರಶ್ನೆ







