ಅರ್ಜಿ ಸಲ್ಲಿಸಿದ 30 ದಿನದೊಳಗೆ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲು ಡಿಸಿ ಆದೇಶ: ಕ್ರೆಡೈ ಶ್ಲಾಘನೆ
ದ.ಕ. ಜಿಲ್ಲಾಧಿಕಾರಿಯ ದಿಟ್ಟ ಕ್ರಮದಿಂದ ರಿಯಲ್ ಎಸ್ಟೇಟ್ ಉದ್ಯಮ, ಸಾರ್ವಜನಿಕರಿಗೆ ಸಹಕಾರಿ: ಪುಷ್ಪರಾಜ್ ಜೈನ್

ಮಂಗಳೂರು, ಮಾ.13: ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಸಮಗ್ರ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ 30 ದಿನದೊಳಗೆ ಪರವಾನಿಗೆ, 8 ದಿನದೊಳಗೆ ಪ್ರವೇಶ ಪತ್ರ ಮತ್ತು 7 ದಿನದೊಳಗೆ ಸ್ಥಳ ಪರಿಶೀಲನೆ ನಡೆಸಬೇಕು ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲಿದ್ದು, ಜಿಲ್ಲಾಧಿಕಾರಿಯ ಈ ಆದೇಶ ಸಾಗತಾರ್ಹ ಎಂದು ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಕ್ರೆಡೈ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆಯನ್ನು ನೀಡುವ ಬಗ್ಗೆ ಏಕಗವಾಕ್ಷಿ ಯೋಜನೆ ಸೇರಿದಂತೆ ಸಮಸ್ಯೆಗಳ ಕುರಿತು ಮನಪಾ, ಮುಡಾ, ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಸಿಆರ್‌ಝೆಡ್, ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕ್ರೆಡೈ, ಸಿವಿಲ್ ಇಂಜಿನಿಯರ್ ಅಸೋಸಿಯೇಶನ್, ಕೆನರಾ ಬಿಲ್ಡರ್ ಆಸೋಸಿಯೇಶನ್ ಮತ್ತಿತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಸಭೆ ನಡೆಸಿದ ಬಳಿಕ ಈ ಆದೇಶ ಹೊರಡಿಸಿದ್ದಾರೆ. ನಿಗದಿತ ಅವಧಿಯೊಳಗೆ ಅರ್ಜಿಯನ್ನು ವಿಲೇವಾರಿ ಮಾಡಲೇಬೇಕು ಎಂಬ ಕಟ್ಟುನಿಟ್ಟಿನ ಆದೇಶದಿಂದಾಗಿ ಕಟ್ಟಡ ಪರವಾನಿಗೆ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯಲು ವಿವಿಧ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ, ಸ್ಥಳ ಪರಿಶೀಲನೆ ಕೆಲಸಗಳು ವಿಳಂಬದಿಂದಾಗಿ ಇಡೀ ಪ್ರಕ್ರಿಯೆಗೆ ಧಕ್ಕೆಯಾಗುತ್ತಿತ್ತು. ಈ ಬಗ್ಗೆ ರಾಜ್ಯ ಸರಕಾರಕ್ಕೆ ಜಿಲ್ಲಾಡಳಿತಕ್ಕೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಕ್ರೆಡೈ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಸಭೆ ಕರೆದು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಇದಕ್ಕಾಗಿ ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಕ್ರೆಡೈ ಅಭಿನಂದನೆ ಸಲ್ಲಿಸುತ್ತದೆ ಮತ್ತು ಆಭಾರಿಯಾಗಿದೆ ಎಂದು ಪುಷ್ಪರಾಜ್ ಜೈನ್ ಹೇಳಿದರು.
ಡೀಮ್ಸ್ ಎನ್ ಒಸಿ:
ಕಟ್ಟಡ ನಿರ್ಮಾಣ ಪೂರ್ವದಲ್ಲಿ ಹಲವು ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ನಿಗದಿತ ಸಮಯದೊಳಗೆ ನಿರಾಕ್ಷೇಪಣಾ ಪತ್ರ ಸಿಗದ ಕಾರಣದಿಂದಾಗಿ ಯೋಜನೆ ವಿಳಂಬವಾಗಿ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಹಲವು ಬಾರಿ ದೂರು ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಗದಿತ ಅವಧಿಯಲ್ಲಿ, ಸಂಬಂಧಪಟ್ಟ ಇಲಾಖೆಯು ಒಂದು ವೇಳೆ ನಿರಾಕ್ಷೇಪಣಾ ಪತ್ರ ನೀಡದಿದ್ದಲ್ಲಿ, ಡೀಮ್ಸ್ ಎನ್‌ಸಿ (ನಿರಾಕ್ಷೇಪಣಾ ಪತ್ರ ನೀಡಲಾಗಿದೆ) ಎಂದು ಪರಿಗಣಿಸಿ ಅದರ ಆಧಾರದಲ್ಲಿ ಕಟ್ಟಡ ನಿರ್ಮಿಸಲು ಸ್ಥಳೀಯ ಸಂಸ್ಥೆಗಳು ಪರವಾನಿಗೆ ನೀಡುವಂತೆ ಜಿಲ್ಲಾಧಿಕಾರಿ ಎಂದರು.
*ಏಕಗವಾಕ್ಷಿ ಮೊದಲ ಹೆಜ್ಜೆ:
ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆಯಲು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸುವ ಮುನ್ನ ಅಗ್ನಿಶಾಮಕ ಇಲಾಖೆ, ಸಿಆರ್‌ಝೆಡ್ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕಿತ್ತು, ಇದರಿಂದಾಗಿ ಯೋಜನೆ ವಿಳಂಭವಾಗುತ್ತಿತ್ತು, ಇಂತಹ ವಿಳಂಬಗಳನ್ನು ತಪ್ಪಿಸುವ ಉದ್ದೇಶದಿಂದ ಕಟ್ಟಡ ಪರವಾನಿಗೆ ಅರ್ಜಿಯನ್ನು ಏಕಗವಾಕ್ಷಿ ಯೋಜನೆಯಡಿ ತರುವ ಬಗ್ಗೆ ಸಭೆಯಲ್ಲಿ ಸಭ ಚರ್ಚೆ ನಡೆಯಿತು.ಮುಂದಿನ ದಿನಗಳಲ್ಲಿ ಏಕಗವಾಕ್ಷಿ ಯೋಜನೆಯನ್ನು ಹಂತ ಹಂತವಾಗಿ ಅಳವಡಿಸುವ ಬಗ್ಗೆ ವರದಿ ತಯಾರಿಸಲು ಸೂಚಿಸಲಾಯಿತು ಎಂದರು.
ಬಹುಮಹಡಿ ಕಟ್ಟಡಗಳ ವಿನ್ಯಾಸಕ್ಕೆ ಮುಡಾದಿಂದ ಅನುಮೋದನೆ ಅಗ್ನಿಶಾಮಕ ದಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅರ್ಜಿ ಸ್ವೀಕರಿಸಿದ ವಾರದೊಳಗೆ ನಿರಾಪೇಕ್ಷಣಾ ಪತ್ರ ನೀಡಬೇಕು. ನೀರು ಹಾಗೂ ಸೀವೇಜ್ ಬಗ್ಗೆ ಎನ್‌ಒಸಿಗೆ ಎರಡು ತಿಂಗಳು ವಿಳಂಬವಾಗುತ್ತಿದ್ದು, ಅದನ್ನು ತಪ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಪರವಾನಿಗೆ ಕೋರಿ ಬರುವ ಅರ್ಜಿಗಳನ್ನು 15 ದಿನಗಳಿಗೊಮ್ಮೆ ಮಹಾನಗರ ಪಾಲಿಕೆಯ ಆಯುಕ್ತರು ಅರ್ಜಿದಾರರು, ಇಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಬೇಕು ಎಂಬ ಆದೇಶವನ್ನೂ ಜಿಲ್ಲಾಧಿಕಾರಿ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳಾದ ಮಂಗಳೂರು ಮಹಾನಗರಪಾಲಿಕೆ, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯತ್‌ಗಳು, ಗ್ರಾಮ ಪಂಚಾಯತ್‌ಗಳು ಮತ್ತು ಒಟ್ಟು ನಗರ ಯೋಜನಾ ಪ್ರಾಧಿಕಾರಗಳು ಕಟ್ಟಡ ಪರವಾನಿಗೆ ನೀಡುವ ಪ್ರಾಧಿಕಾರವಾಗಿದೆ. ಆದುದರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಸಹ ಇದೇ ರೀತಿ ಏಕಗವಾಕ್ಷಿ ಯೋಜನೆ ಮಾದರಿಯಲ್ಲಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಇದೊಂದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಸಂಸದರು, ಸಚಿವರು, ಶಾಸಕರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದಾಗಿ ಜಿಲ್ಲಾಧಿಕಾರಿ ಸಭೆ ನಡೆಸಿ, ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ರವಿಕುಮಾರ್ ಅವರ ದಿಟ್ಟ ಆದೇಶವು ಜಿಲ್ಲೆಯ ಅಭಿವೃದ್ಧಿಯಲ್ಲಿ ಹೊಸ ಶಕೆಯನ್ನು ನಿರ್ಮಾಣ ಮಾಡಲಿದೆ. ಮಾತ್ರವಲ್ಲದೆ ಈ ಆದೇಶವು ಅಭಿವೃದ್ಧಿಗೆ ಮೈಲುಗಲ್ಲಾಗಲಿದೆ’ ಎಂದು ಪುಷ್ಪರಾಜ್ ಜೈನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ರೆಡೈ ಕಾರ್ಯದರ್ಶಿ ಪ್ರಶಾಂತ್ ಸನಿಲ್, ಕೋಶಾಧಿಕಾರಿ ಗುರುಮೂರ್ತಿ ಮತ್ತು ನಿಯೋಜಿತ ಅಧ್ಯಕ್ಷ ವಿನೋದ್ ಪಿಂಟೊ ಉಪಸ್ಥಿತರಿದ್ದರು.