ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಯು ಯಾವಾಗ ಕಾರ್ಯರೂಪಕ್ಕೆ ಬರಲಿದೆ ಎನ್ನುವುದು ಖಚಿತವಿಲ್ಲ: ಜೆಐಸಿಎ

ಹೊಸದಿಲ್ಲಿ: ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ಹಣಕಾಸು ನೆರವನ್ನು ಒದಗಿಸುತ್ತಿರುವ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (ಜೆಐಸಿಎ)ಯು, ಯೋಜನೆಯು ಯಾವಾಗ ಕಾರ್ಯರೂಪಕ್ಕೆ ಬರಲಿದೆ ಎನ್ನುವದು ತನಗೆ ಖಚಿತವಿಲ್ಲ ಎಂದು ಹೇಳಿದೆ ಎಂದು thewire.in ವರದಿ ಮಾಡಿದೆ.
ಸದ್ಯ ಭಾರತ ಪ್ರವಾಸದಲ್ಲಿರುವ ಜೆಐಸಿಎ ಅಧ್ಯಕ್ಷ ಅಕಿಹಿಕೊ ತನಕಾ ಅವರು,‘ಯೋಜನೆಯು ಬೇಗನೆ ಪೂರ್ಣಗೊಳ್ಳುವುದು ಅಪೇಕ್ಷಣೀಯವಾಗಿದ್ದರೂ ಸುರಕ್ಷತೆಯ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ’ಎಂದು ಹೇಳಿದರು. ‘ಗಡುವಿನ ಬಗ್ಗೆ ವೈಯಕ್ತಿವಾಗಿ ಹೇಳುವುದಾದರೆ ಯೋಜನೆಯು ಎಷ್ಟು ಬೇಗ ಪೂರ್ಣಗೊಳ್ಳುತ್ತದೋ ಅಷ್ಟು ಒಳ್ಳೆಯದು. ಜಪಾನ್ ಹಲವಾರು ವೇಗದ ರೈಲು ಯೋಜನೆಗಳನ್ನು ಹೊಂದಿದೆ ಮತ್ತು ಭಾರತದಲ್ಲಿಯ ಯೋಜನೆಯು ನಿಜಕ್ಕೂ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ನಿಖರವಾಗಿ ಹೇಳುವುದು ತುಂಬ ಕಷ್ಟ. ನಾವು ಸಾಧ್ಯವಿದ್ದಷ್ಟು ಬೇಗ ಅದನ್ನು ಪೂರ್ಣಗಳಿಸಲು ಬಯಸಿದ್ದೇವೆ,ಆದರೆ ವ್ಯವಸ್ಥೆಯು ಸುರಕ್ಷಿತವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಸುರಕ್ಷತೆ ಅತ್ಯಂತ ಮುಖ್ಯ ವಿಷಯವಾಗಿದೆ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತನಕಾ ಹೇಳಿದರು.
2017ರಲ್ಲಿ ಯೋಜನೆಗೆ ಶಿಲಾನ್ಯಾಸವನ್ನು ನೆರವೇರಿಸಲಾಗಿದ್ದು,ಈ ವರ್ಷದ ಜನವರಿ ಅಂತ್ಯದ ವೇಳೆಗೆ ಯೋಜನೆಯ ಕೇವಲ ಶೇ.30ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು. ಮಾಧ್ಯಮಗಳ ವರದಿಯಂತೆ ಮಹಾರಾಷ್ಟ್ರದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಯೋಜನೆಯ ಪ್ರಗತಿಯಲ್ಲಿ ಗಮನಾರ್ಹ ವಿಳಂಬಗಳಾಗುತ್ತಿವೆ.
ಯೋಜನೆಯು 2027ರಲ್ಲಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ ಮತ್ತು 2026,ಆಗಸ್ಟ್ನಲ್ಲಿ ಗುಜರಾತಿನ ಸೂರತ್ ಮತ್ತು ಬಿಲ್ಲಿಮೋರಾ ನಡುವೆ ಪ್ರಾಯೋಗಿಕ ಸಂಚಾರವನ್ನು ನಿಗದಿಗೊಳಿಸಲಾಗಿದೆ. ಅಭಿವೃದ್ಧಿಶೀಲ ದೇಶಗಳಿಗೆ ನೆರವು ನೀಡಲು ಜಪಾನ್ ಸರಕಾರದ ಅಧಿಕೃತ ಘಟಕವಾಗಿರುವ ಜೆಐಸಿಎ ಯೋಜನೆಗೆ 250,000 ಮಿಲಿಯನ್ ಜಪಾನ ಯೆನ್ ಅಥವಾ ಸುಮಾರು 18,000 ಕೋಟಿ ರೂ.ಗಳನ್ನು ಒದಗಿಸುವುದಾಗಿ 2017ರಲ್ಲಿ ಘೋಷಿಸಿತ್ತು. ಮೌಲ್ಯದ ದೃಷ್ಟಿಯಲ್ಲಿ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ವಿಶ್ವದಲ್ಲಿ ಜೆಐಸಿಎಯ ಅತ್ಯಂತ ದೊಡ್ಡ ಯೋಜನೆಯಾಗಿದೆ.
ಮಾ. 20-21ಕ್ಕೆ ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾರ ಭಾರತ ಭೇಟಿಗೆ ಪೂರ್ವಭಾವಿಯಾಗಿ ಇಲ್ಲಿರುವ ತನಕಾ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.







