ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ನೀರಿನ ಡ್ರಮ್‍ನಲ್ಲಿ ಮಹಿಳೆಯ ಮೃತದೇಹ ಪತ್ತೆ
ಬೆಂಗಳೂರಿನಲ್ಲಿ ನಡೆದ 2ನೇ ಘಟನೆ
ಬೆಂಗಳೂರು, ಮಾ.13: ಎರಡನೇ ಬಾರಿಗೆ ನಗರದ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿಯ ನೀರಿನ ಡ್ರಮ್‍ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಮಹಿಳೆಯೊಬ್ಬರ ಶವವನ್ನು ಡ್ರಮ್‍ನಲ್ಲಿ ತುಂಬಿ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದು ಇದೀಗ ಇದೇ ಮಾದರಿಯಲ್ಲಿ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್‍ನಲ್ಲಿ ಮಹಿಳೆಯ ಶವವಿಟ್ಟು ಪರಾರಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಡ್ರಮ್‍ನಲ್ಲಿ ನಿನ್ನೆ ಸಂಜೆ 7ರ ವೇಳೆ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದ ಗೇಟ್ ಬಳಿ ಇದ್ದ ಪ್ಲಾಸ್ಟಿಕ್ ಡ್ರಮ್‍ನಿಂದ ಕೊಳೆತ ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಆಟೊ ಚಾಲಕರೊಬ್ಬರು ಡ್ರಮ್‍ನ ಮುಚ್ಚುಳ ತೆರೆದು ನೋಡಿದ್ದಾರೆ. ಡ್ರಮ್ ಮುಚ್ಚುಳ ತೆರೆಯುತ್ತಿದ್ದಂತೆ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಕಂಡಿದೆ.
ಮಹಿಳೆ ಶವ ನೋಡಿ ಗಾಬರಿಯಾದ ಆಟೊ ಚಾಲಕ ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿ ಎಫ್‍ಎಸ್‍ಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಿ ಬೆಳಗ್ಗೆ 10 ಗಂಟೆ ಸುಮಾರಿಗೆ ಆಟೊದಲ್ಲಿ ತಂದು ರೈಲ್ವೆ ನಿಲ್ದಾಣದ ಡ್ರಮ್‍ನಲ್ಲಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆನ್ನಲಾಗಿದೆ.
ಡ್ರಮ್‍ನಲ್ಲಿ ಶವವಾಗಿ ಪತ್ತೆಯಾಗಿರುವ ಮಹಿಳೆ 35 ವರ್ಷದ ಆಸುಪಾಸಿನವಳೆಂದು ತಿಳಿದುಬಂದಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆಟೊದಲ್ಲಿ ಬಂದು ಡ್ರಮ್ ಇಟ್ಟು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.
ಇನ್ನೂ, ಇದೇ ಮಾದರಿಯಲ್ಲಿ ಡ್ರಮ್ ಹಾಗೂ ಗೋಣಿ ಚೀಲದಲ್ಲಿ ಮಹಿಳೆಯರ ಶವಗಳ ಪತ್ತೆಯಾಗಿದ್ದವು. ಆ ಪ್ರಕರಣಗಳ ತನಿಖೆ ಕೈಗೊಂಡಿರುವ ರೈಲ್ವೇ ಪೊಲೀಸರು, ಹತ್ಯೆಯಾದವರ ಪತ್ತೆ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಅದೇ ಮಾದರಿಯಲ್ಲಿ ಮಹಿಳೆಯನ್ನು ಹತ್ಯೆಗೈದು ಡ್ರಮ್‍ನಲ್ಲಿ ತುಂಬಿರುವುದು ಅಚ್ಚರಿ ತಂದಿದೆ.