22 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡ ರಾಜ್ಯ ಸರಕಾರ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪ

ಬೆಂಗಳೂರು, ಮಾ.14: 'ರಾಜ್ಯ ಸರಕಾರವು ಸುಮಾರು 22 ಸಾವಿರ ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ಬಾಕಿ ಹಣವನ್ನು ಉಳಿಸಿಕೊಂಡಿದ್ದು, ಎರಡು ವರ್ಷಗಳಿಂದ ಈ ಹಣವನ್ನು ಪಾವತಿ ಮಾಡುತ್ತಿಲ್ಲ' ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ.
ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 'ಎರಡು ವರ್ಷಗಳ ಹಿಂದೆ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರೈಸಿದ್ದರೂ, ಸರಕಾರವು ಅವರಿಗೆ ಹಣವನ್ನು ಪಾವತಿ ಮಾಡಿಲ್ಲ. ಲೋಕೋಪಯೋಗಿ, ನೀರಾವರಿ ಮತ್ತು ಬಿಬಿಎಂಪಿಯಲ್ಲಿ ಹೆಚ್ಚು ಕಾಮಗಾರಿಗಳು ನಡೆದಿವೆ. ಈ ಮೂರು ಇಲಾಖೆಗಳೇ ಸುಮಾರು 10 ಸಾವಿರ ಕೋಟಿ ರೂ.ಗಳನ್ನು ಪಾವತಿ ಬಾಕಿ ಉಳಿಸಿಕೊಂಡಿವೆ' ಎಂದರು.
'ಬಾಕಿ ಹಣವನ್ನು ಜೇಷ್ಟತೆಯ ಆಧಾರದಲ್ಲಿ ಬಿಡುಗಡೆ ಮಾಡುತ್ತಿಲ್ಲ. ರಾಜಕಾರಣಿಗಳು ಸೂಚಿಸಿದವರಿಗೆ ಮಾತ್ರ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಶೇ.80ರಷ್ಟು ಜೇಷ್ಟತೆಯ ಆಧಾರದಲ್ಲಿ ಶೇ.20ರಷ್ಟು ಮೊತ್ತ ವಿವೇಚನಾ ಕೋಟಾದಡಿಯಲ್ಲಿ ಬಿಡುಗಡೆ ಮಾಡಬೇಕು ಎಂದು ನಿಯಮಗಳು ಹೇಳುತ್ತವೆ. ಆದರೆ ಅದನ್ನು ವಾಸ್ತವದಲ್ಲಿ ಪಾಲನೆ ಮಾಡಲು ಆಗುತ್ತಿಲ್ಲ' ಎಂದು ಅವರು ಹೇಳಿದರು.
ಕಾಮಗಾರಿಗಳನ್ನು ಮುಗಿಸಿದ ಬಳಿಕ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ, ಬಿಲ್ ಪಾವತಿ ಮಾಡಬಹುದು ಎಂದು ಕಡತದ ಮೇಲೆ ಬರೆಯಲಾಗುತ್ತದೆ. ಆದರೆ ಬಾಕಿ ಮೊತ್ತ ಬಿಡುಗಡೆಗೂ ಅಧಿಕಾರಿಗಳು ಲಂಚ ಕೇಳುತ್ತಾರೆ. ಇದರಿಂದ ಪ್ರಾಮಾಣಿಕ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತದೆ ಎಂದು ಅವರು ಆರೋಪಿಸಿದರು.
ಕೂಡಲೇ ಹಂತಹಂತವಾಗಿ ಬಾಕಿ ಹಣವನ್ನು ಬಿಡುಗಡೆ ಮಾಡದಿದ್ದರೆ, ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡಲಾಗುವುದು. ಅಂತಿಮವಾಗಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಜಿ.ಎಂ. ರವೀಂದ್ರ, ಉಪಾಧ್ಯಕ್ಷ ಆರ್. ಅಂಬಿಕಾಪತಿ, ಹನುಮಂತಯ್ಯ, ರಮೇಶ್. ಎಂ, ಎಂ.ಹೆಚ್. ಯತಿರಾಜ್ ಉಪಸ್ಥಿತರಿದ್ದರು.







