ಮಾ.16: ಮಂಗಳೂರಿನಲ್ಲಿ ‘ಕರಾವಳಿ ಪ್ರಜಾಧ್ವನಿ’ ಕಾರ್ಯಕ್ರಮ

ಮಂಗಳೂರು, ಮಾ.14: ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಲುವಾಗಿ ಕಾಂಗ್ರೆಸ್ ಹಮ್ಮಿಕೊಂಡ ‘ಪ್ರಜಾಧ್ವನಿ ಯಾತ್ರೆ’ಯ ಕರಾವಳಿ ಭಾಗದ ಕಾರ್ಯಕ್ರಮವು ಮಾ.16ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 10:30ಕ್ಕೆ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಜೆಪ್ಪು ಕಾಸಿಯಾ ಚರ್ಚ್ ಹಾಲ್ ಮತ್ತು ಸಂಜೆ 4ಕ್ಕೆ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಉರ್ವಸ್ಟೋರ್ ಮೈದಾನದಲ್ಲಿ ‘ಕರಾವಳಿ ಪ್ರಜಾಧ್ವನಿ ಯಾತ್ರಾ’ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಎರಡೂ ಬ್ಲಾಕ್‌ನ 38 ವಾರ್ಡ್‌ಗಳಲ್ಲೂ ಪೂರ್ವಸಿದ್ಧತೆ ನಡೆಸಲಾಗಿದೆ ಎಂದರು.
ರಾಜ್ಯ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಹಾಗೂ ಮಾಜಿ ಶಾಸಕರ ಸಹಿತ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಜನಸಾಮಾನ್ಯರ ಸಮಸ್ಯೆಗಳು, ಸರಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ಮತೀಯ ವಿಚಾರಗಳು ಚರ್ಚೆಗೆ ಬರಲಿವೆ ಎಂದ ಐವನ್ ಡಿಸೋಜ, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಅಲ್ಲಲ್ಲಿ ಬ್ಯಾನರ್ ಹಾಕಿ ಪ್ರಚಾರ ಪಡೆಯುತ್ತಿದ್ದಾರೆ. ಕಮಿಷನ್ ದುಡ್ಡಿನಿಂದ ಜನರನ್ನು ಸೇರಿಸಿ ವಿನೋದಾವಳಿ ಏರ್ಪಡಿಸಿ ಅಭಿವೃದ್ಧಿ ಕಾರ್ಯಕ್ರಮ ಅಂತ ಬಿಂಬಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ನಗರದಲ್ಲಿ ನೀರಿನ ಸಮಸ್ಯೆ ಇದೆ. ರಸ್ತೆ ಅಗೆತದಿಂದ ಸಂಚಾರಕ್ಕೆ ಅಡ್ಡಿಯಾಗಿವೆ. ಬಾವಿಗಳಿಗೆ ಡ್ರೈನೇಜ್ ನೀರು ಹರಿದು ಆರೋಗ್ಯ ಸಮಸ್ಯೆ ಎದುರಾಗಿವೆ. ಈ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುತ್ತಿಲ್ಲ. ಬಿಜೆಪಿಯ ಧ್ವಜ ಹಾಕಿರುವ ಮನೆಗಳಲ್ಲೇ ಬಿಜೆಪಿಯನ್ನು ಬದಲಿಸಲು ಕಾಯುತ್ತಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗೆ ಸ್ಪಂದನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಲೀಂ, ಪ್ರಕಾಶ್ ಸಾಲ್ಯಾನ್, ಕಾರ್ಪೊರೇಟರ್ ಶಂಶುದ್ದೀನ್ ಕುದ್ರೋಳಿ, ಮಾಜಿ ಕಾರ್ಪೊರೇಟರ್ ಅಶೋಕ್ ಡಿ.ಕೆ., ಶಬ್ಬೀರ್ ಸಿದ್ದಕಟ್ಟೆ, ರಾಕೇಶ್ ದೇವಾಡಿಗ, ಚಿತ್ತರಂಜನ್ ಶೆಟ್ಟಿ, ರಮಾನಂದ ಬೋಳಾರ, ಸವಾದ್, ಹಬೀಬ್ ಕಣ್ಣೂರು, ಮೀನಾ ಟೆಲ್ಲಿಸ್, ನಝೀರ್ ಬಜಾಲ್ ಉಪಸ್ಥಿತರಿದ್ದರು.







