ರಾಜ್ಯ ಸರಕಾರ ಅಂಗಡಿ ಬಾಗಿಲು ಮುಚ್ಚಿದೆ: ಯು.ಟಿ.ಖಾದರ್ ಟೀಕೆ

ಮಂಗಳೂರು: ಜಿಲ್ಲೆಯಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸರಕಾರದ ಯಾವುದೇ ಕೆಲಸ ಆಗುತ್ತಿಲ್ಲ. ಸವಲತ್ತು ಸಿಗುತ್ತಿಲ್ಲ. ಕಚೇರಿ ಮುಚ್ಚಿ ಬಿಜೆಪಿಯ ಜನಪ್ರತಿನಿಧಿಗಳು ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಅಧಿಕಾರಿಗಳು ಚುನಾವಣಾ ಕರ್ತವ್ಯವೆಂದು ಎಲ್ಲ ಕೆಲಸಗಳಿಂದ ದೂರ ಉಳಿದಿದ್ದಾರೆ. ಇದರಿಂದಾಗಿ ಸರಕಾರಿ ಕಚೇರಿಯಲ್ಲಿ ಜನರ ಸಂಕಷ್ಟವನ್ನು ಕೇಳುವವರಿಲ್ಲದಾಗಿದೆ.ರಾಜ್ಯ ಸರಕಾರ ಅಂಗಡಿ ಬಾಗಿಲು ಮುಚ್ಚಿದೆ ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೀಗ ರಾಜ್ಯದಲ್ಲಿ ಬಿಜೆಪಿ ಕೈಗೊಂಡಿರುವುದು ವಿಜಯ ಸಂಕಲ್ಪ ಯಾತ್ರೆ ಅಲ್ಲ 40 ಪರ್ಸೆಂಟ್ ಯಾತ್ರೆ ಎಂದು ಟೀಕಿಸಿದರು.
ಕಳೆದ ಬಜೆಟ್ ವೇಳೆ ಸರಕಾರದ ಸಾಧನೆಯ ರಿಪೋರ್ಟ್ ಕಾರ್ಡ್ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಕಾಲೇಜುಗಳಲ್ಲಿ ಮೊದಲ ವರ್ಷದ ಪದವಿ ಫಲಿತಾಂಶ ಬಂದಿಲ್ಲ. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಕೊಡುವ ಯೋಗ್ಯತೆ ಇಲ್ಲದವರು ರಿಪೋರ್ಟ್ ಕಾರ್ಡ್ ಹೇಗೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಆರ್‌ಸಿಗೆ ಪ್ರಿಂಟ್ ಕಾರ್ಡ್ ಇಲ್ಲ. ಪರೀಕ್ಷೆ ಬರೆದು ಮಾರ್ಕ್ ಕಾರ್ಡ್ ಬಾರದೇ ಇದ್ದರೆ ಕೆಲಸಕ್ಕೆ ಹೋಗುವುದು ಹೇಗೆ, ಗರ್ಭಿಣಿಯರಿಗೆ ಸೌಲಭ್ಯ ಒದಗಿಸುವ ತಾಯಿ ಕಾರ್ಡ್ ಕೂಡ ಕೊಡ್ತಿಲ್ಲ. ಇಂತಹ ಎಲ್ಲ ಸಮಸ್ಯೆ ಇರುವಾಗ ವಿಜಯ ಸಂಕಲ್ಪ ಕೈಗೊಂಡಿದ್ದಾರೆ. ಕೊಟ್ಟ ಭರವಸೆಯನ್ನು ಈಡೇರದಿದ್ದರೂ ಬಿಜೆಪಿ ನಾಯಕರಿಗೆ ಯಾವುದೇ ನಾಚಿಕೆ ಇಲ್ಲ ಎಂದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿ ?: ಕುಡಿಯುವ ನೀರಿಗೆ ಅನುದಾನ ಸರಕಾರ ಕ್ಷೇತ್ರವಾರು ಬಿಡುಗಡೆ ಮಾಡಬೇಕು. ಈ ಹಿಂದೆ ಕಾಂಗ್ರೆಸ್ ಸರಕಾರ ಆ ರೀತಿ ಮಾಡುತ್ತಿತ್ತು. ಆದರೆ ಬಿಜೆಪಿ ಸರಕಾರಕ್ಕೆ ಜನರ ಕಷ್ಟ ಗೊತ್ತಾಗುತ್ತಿಲ್ಲ. ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಜನರಿಗೆ ಘೋರ ಅನ್ಯಾಯವನ್ನು ರಾಜ್ಯ ಸರಕಾರ ಮಾಡ್ತಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತರು, ಆರೋಗ್ಯ, ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುತ್ತಿದ್ದರೂ ಸರಕಾರದಿಂದ ಸ್ಪಂದನೆ ಇಲ್ಲ. ತಕ್ಷಣ ಮೀಟಿಂಗ್ ಕರೆದು ನೀರಿನ ಟಾಸ್ಕ್‌ಫೋರ್ಸ್‌ಗೆ 30-50 ಲಕ್ಷ ರೂ.ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರಕಾರ ನಡೆಸಿದವರಿಗೆ ಉತ್ತಮ ಕೆಲಸ ಮಾಡಿದ್ದರೆ ಯಾಕೆ ಇಷ್ಟು ಭಯ ? ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ, ನೀರಿನ ಕೊರತೆ ಇರುವಲ್ಲಿಗೆ ಟ್ಯಾಂಕರ್ ವ್ಯವಸ್ಥೆ ಮಾಡಬೇಕು ಎಂದರು.
ಅಬ್ಬಕ್ಕ ಭವನಕ್ಕೆ ಹಿಂದೆ ಕಾಂಗ್ರೆಸ್ ಸರಕಾರ 8 ಕೋಟಿ ರೂ. ನೀಡಿದ್ದರೂ ಇಂದಿಗೂ ಭವನ ಸ್ಟಾರ್ಟ್ ಮಾಡಲು ಆಗಿಲ್ಲ. ಅದು ಬಿಟ್ಟು ಕಾರ್ಕಳ, ವಿಜಯನಗರ ಉತ್ಸವಕ್ಕೆ ಅನುದಾನ ನೀಡಿದ್ದಾರೆ. ಅಬ್ಬಕ್ಕ ಉತ್ಸವಕ್ಕೆ ಕಾಂಗ್ರೆಸ್ 50 ಲಕ್ಷ ರೂ. ನೀಡಿತ್ತು. ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮುಂದೆ ರಾಜ್ಯದ ಜನತೆ ಇದಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಅಝಾನ್ ಬಗ್ಗೆ ಆಡಿದ ಮಾತು ಮತ್ತು ರಾಷ್ಟ್ರೀಯವಾದಿ ಮುಸ್ಲಿಮರು ಬಿಜೆಪಿಯೊಂದಿಗೆ ಇರುತ್ತಾರೆ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಈಶ್ವರಪ್ಪ ಅವರ ಬಗ್ಗೆ ಏನು ಹೇಳುವುದಿಲ್ಲ. ಅವರ ಮಾತಿಗೂ ಬ್ರೈನಿಗೂ ಸಂಪರ್ಕ ಇಲ್ಲ. ಅವರಿಗೆ ಮಿನಿಸ್ಟರ್ ಕೊಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಇಲ್ಲ. ಹೀಗಾಗಿ ಹೈಕಮಾಂಡನ್ನು ಮೆಚ್ಚಿಸಲು ಏನೇನೋ ಹೇಳ್ತಾರೆ. ಚುನಾವಣೆಯ ಸಮಯ ಭಾವನಾತ್ಮಕ ಬೇಡ. ಏನು ಕಾರ್ಯ ಮಾಡಿದ್ದೀರಿ ಅದನ್ನು ಹೇಳಿ, ಪ್ರತಿ ಧರ್ಮಕ್ಕೂ ಮಹತ್ವ ಇದೆ. ಪರಸ್ಪರ ಅರ್ಥ ಮಾಡಿಕೊಂಡು ಹೋಗಬೇಕು. ಧರ್ಮದ ಬಗ್ಗೆ ಸಲ್ಲದು ಎಂದರು.
ನಮ್ಮಲ್ಲಿ ಗ್ಯಾರೆಂಟಿ, ವಾರೆಂಟಿಯೂ ಇದೆ: ಕಾಂಗ್ರೆಸ್‌ನ ಗ್ಯಾರೆಂಟ್ ಸ್ಕೀಮ್‌ನ ಬಗ್ಗೆ ಕೇಳಿದಾಗ ನಮ್ಮಲ್ಲಿ ಗ್ಯಾರಂಟಿಯೂ ವಾರಂಟಿಯೂ ಇದೆ. ಈಗಿನ ಬಿಜೆಪಿ ಸರಕಾರ ನೀಡಿರುವ ಶೇ10ರಷ್ಟು ಭರವಸೆಯನ್ನು ಈಡೇರಿಸಿಲ್ಲ . ಕಾಂಗ್ರೆಸ್ ಕೊಟ್ಟ ಮಾತು ಈಡೇರಿಸೋದು ಗ್ಯಾರಂಟಿ ಎಂದು ಖಾದರ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ, ಸಂತೋಷ್ ಶೆಟ್ಟಿ, ಫಾರೂಕ್, ಜಗದೀಶ್ ಉಪಸ್ಥಿತರಿದ್ದರು.