ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ದ ಡಿ.ಕೆ.ಸುರೇಶ್ ಸ್ಪರ್ಧೆ ವಿಚಾರ: ಡಿಕೆಶಿ ಹೇಳಿದ್ದೇನು?

ಬೆಂಗಳೂರು, ಮಾ.14: ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ರಾಮನಗರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, 'ರಾಮನಗರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಸ್ಪರ್ಧೆ ಕುರಿತು ಸ್ಥಳೀಯ ಕಾರ್ಯಕರ್ತರು, ಮುಖಂಡರಿಂದ ನಮಗೆ ಸಂದೇಶ ಬಂದಿದೆ. ಹೈಕಮಾಂಡ್ ಮಟ್ಟದಲ್ಲೂ ಚರ್ಚೆ ನಡೆದಿದೆ' ಎಂದು ಹೇಳಿದರು.
'ಈ ಸಂಬಂಧ ಸುರೇಶ್ ಅಥವಾ ಕಾರ್ಯಕರ್ತರ ಜೊತೆ ಮಾತನಾಡಿಲ್ಲ. ನನಗೆ ಅನಗತ್ಯವಾಗಿ ಉಪಚುನಾವಣೆ ಮಾಡಲು ಇಚ್ಛೆ ಇಲ್ಲ. ಈ ಬಗ್ಗೆ ಎಲ್ಲರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ'' ಎಂದು ಶಿವಕುಮಾರ್ ತಿಳಿಸಿದರು.
ವಸತಿ ಸಚಿವ ವಿ.ಸೋಮಣ್ಣ ನಮ್ಮ ತಾಲೂಕಿನವರು. ಧರ್ಮ ಹಾಗೂ ತಾಲೂಕಿನ ಕೆಲಸಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ರಾಜಕಾರಣವೆ ಬೇರೆ, ಬಾಂಧವ್ಯವೆ ಬೇರೆ. ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ನಾನು ಹೇಳಿಲ್ಲ. ನಾವು ನಮ್ಮ ಕೆಲಸ ಮಾಡಿಕೊಂಡು ಇದ್ದೇವೆ. ನಾವು ಬೆಳಗಾವಿ ಅಧಿವೇಶನ ಮುಗಿಸಿಕೊಂಡು ವಿಮಾನದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದೆವು. ಆಗ ತೆಗೆದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ







