ಉರಿಗೌಡ - ನಂಜೇಗೌಡ ದ್ವಾರಕ್ಕೆ ಕಾರ್ಯಕರ್ತರಲ್ಲಿಯೇ ವಿರೋಧ: ಈಶ್ವರಪ್ಪ

ಉಡುಪಿ : ಮಂಡ್ಯದಲ್ಲಿ ಹಾಕಿರುವ ಉರಿಗೌಡ -ನಂಜೇಗೌಡ ದ್ವಾರದ ಬಗ್ಗೆ ಸರಿ ತಪ್ಪು ಚರ್ಚೆಗಳು ನಡೆದಿವೆ. ನಮ್ಮ ಕಾರ್ಯಕರ್ತರೇ ಸರಿ ಇಲ್ಲ ಎಂದು ಹೇಳಿದಕ್ಕೆ ಅದನ್ನು ತೆರವು ಮಾಡಿದ್ದೇವೆ. ಇದರ ಬಗ್ಗೆ ಯಾರು ಕೂಡ ಏನು ಬೇಕಾದರೂ ಹೇಳಬಹುದು. ಇದರಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾವು ಹಾಕಿದ್ದೆ ಸರಿ ಎಂದು ಹೇಳುವ ಪಕ್ಷ ನಮ್ಮದಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಣಿಪಾಲದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯ ನಮಗೆ ಶ್ರೀರಕ್ಷೆಯಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರ ಜನರಿಗೆ ಮನವರಿಕೆಯಾಗಿದೆ. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್, ಬಿಜೆಪಿ ಮೇಲೆ ಶೇ.40 ಆರೋಪ ಮಾಡುತ್ತಿದ್ದಾರೆ. ಒಂದೇ ಒಂದು ದಾಖಲೆ ಕೊಟ್ಟಿಲ್ಲ. ದೇಶದ ರಕ್ಷಣೆ ಮತ್ತು ಸಂಸ್ಕೃತಿ ಗೋಸ್ಕರ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೂರ್ಣ ತನಿಖೆಯಾಗಿದೆ. ಈ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದ ಅವರು, ನಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ಇದೆ. ಯಾರೇ ಉಪ್ಪು ತಿಂದರೂ ನೀರು ಕುಡಿಯಬೇಕು. ಮಾಡಾಳ್ ಪ್ರಕರಣದಲ್ಲಿ ತನಿಖೆ ಆರಂಭಿಕ ಹಂತದಲ್ಲಿದೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿ ಸುತ್ತಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಬಹಳ ಸಲ ಉಡುಪಿಗೆ ಬಂದರು. ಒಮ್ಮೆಯೂ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿಲ್ಲ. ಮುಖ್ಯಮಂತ್ರಿ ಆಗಿದ್ದ ಕೃಷ್ಣ ಮಠಕ್ಕೆ ಬರದ ಕಾರಣ ಕೃಷ್ಣನ ಶಾಪದಿಂದಲೇ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಇನ್ನಾದರೂ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಭೇಟಿ ನೀಡಿ ಪಾಪ ಪರಿಹಾರ ಮಾಡಿಕೊಳ್ಳಲಿ. ಇದನ್ನು ನಾನು ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿಯಿಂದ ಹೇಳುತ್ತಿದ್ದೇನೆಯೇ ಹೊರತು ರಾಜಕೀಯ ಉದ್ದೇಶ ದಿಂದಲ್ಲ ಎಂದರು.
ಸಿದ್ದರಾಮಯ್ಯ ಎಲ್ಲ ಕಡೆ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಕೃಷ್ಣ ಮಠಕ್ಕೆ ಬರಲ್ಲ. ಅದೇ ರೀತಿ ಮಠಗಳಿಗೆ ಹಣವನ್ನು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ನನಗೂ ಹಣ ಕೊಟ್ಟಿದ್ದಾರೆ. ನಾನು ಮಂತ್ರಿಯಾಗಿದ್ದಾಗ ಅವರ ಬೇಡಿಕೆಗಳಿಗೂ ಸ್ಪಂದಿಸಿದ್ದೇನೆ. ನಮ್ಮಿಬ್ಬರ ನಡುವೆ ಸ್ನೇಹ ಚೆನ್ನಾಗಿದೆ. ಆದರೆ ಪಕ್ಷದ ವಿಚಾರ ಬಂದಾಗ, ಮೋದಿಯನ್ನು ಟೀಕೆ ಮಾಡಿದಾಗ ನಾನು ಯಾವ ಭಾಷೆ ಬಳಸಿದ್ದೇನೆ ನಿಮಗೆಲ್ಲರಿಗೂ ಗೊತ್ತು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಖಂಡ ರಾದ ನಯನಾ ಗಣೇಶ್, ಉದಯ ಕುಮಾರ್ ಶೆಟ್ಟಿ, ಪ್ರಸಾದ್ ಕುಮಾರ್, ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.
ಮುತಾಲಿಕ್ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯೆ
ಕಾರ್ಕಳದಲ್ಲಿ ಸುನಿಲ್ ಕುಮಾರ್ ವಿರುದ್ಧ ಮುತಾಲಿಕ್ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಯಾರು ಬೇಕಾದರೂ ಯಾವುದೇ ಚುನಾವಣೆ ಯಲ್ಲಿ ನಿಂತು ಕೊಳ್ಳಬಹುದು. ಹಿಂದೂ ಸಂಘಟನೆ, ಹಿಂದೂ ಸಮಾಜವನ್ನು ನಾವು ಕೊಂಡುಕೊಂಡಿಲ್ಲ. ನಾವು ಹಿಂದೂ ಸಮಾಜದ ರಕ್ಷಣೆಗೆ ಏನೇನು ಬೇಕು ಅದನ್ನು ಮಾಡಿದ್ದೇವೆ. ಹಿಂದೂ ಸಮಾಜ ಯಾರು ರಕ್ಷಣೆ ಮಾಡುತ್ತಾರೆ ಎಂದು ಮತದಾರರು ತೀರ್ಮಾನ ಮಾಡುತ್ತಾರೆ. ಮುತಾಲಿಕ್ ಬಿಜೆಪಿಯವರಲ್ಲ. ಕಾಂಗ್ರೆಸ್‌ನವರು ಕಾರ್ಕಳದಲ್ಲಿ ಏನೇ ಮಾಡಿದರು ಅಟ್ಟರ್ ಫ್ಲಾಪ್ ಆಗುತ್ತಾರೆ ಎಂದು ಕಟುವಾಗಿ ಟೀಕಿಸಿದರು.







