ಉಡುಪಿ: ಬಾಲಕಿಗೆ ಲೈಂಗಿಕ ಕಿರುಕುಳ; ಪೋಕ್ಸೊ ಆರೋಪಿಗೆ 3 ವರ್ಷ ಜೈಲು ಶಿಕ್ಷೆ, ದಂಡ

ಉಡುಪಿ, ಮಾ.14: ಎರಡು ವರ್ಷಗಳ ಹಿಂದೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 14ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.
ಅಸ್ಸಾಂ ರಾಜ್ಯದ ಆರೋಪಿ ದೀರೇಂದ್ರ ನವಲಶೂದ್ರ (32) ಶಿಕ್ಷೆಗೆ ಗುರಿ ಯಾದ ಆರೋಪಿ.
ಬಾಲಕಿ ತನ್ನ ಮನೆಯ ಬಳಿ ಅಂಗಡಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ದೀರೇಂದ್ರ ಹಿಂಬಾಲಿಸಿಕೊಂಡು ಬಂದು ಆಕೆಯನ್ನು ತಡೆದು ನಿಲ್ಲಿಸಿದನು. ಬಳಿಕ ಆಕೆಯ ಕೈಯನ್ನು ಹಿಡಿದು ತೊಂದರೆ ಕೊಟ್ಟಿದ್ದು, ನೊಂದ ಬಾಲಕಿಯ ಹೆದರಿ ಅಲ್ಲಿಯೇ ಬಿದ್ದಿದ ಕೋಲು ತೆಗೆದು ಆತನಿಗೆ ಹೊಡೆಯಲು ಹೋದಾಗ ಆತ ತಪ್ಪಿಸಿಕೊಂಡಿದ್ದನು.
ನಂತರ ಆತ ಆಕೆಯನ್ನು ಹಿಂಬಾಲಿಸಿ ಮನೆವೆರೆಗೆ ಹೋಗಿದ್ದು, ಅಲ್ಲಿ ನೊಂದ ಬಾಲಕಿಯ ತಾಯಿಗೆ ಘಟನೆ ಬಗ್ಗೆ ತಿಳಿಸಿದರು. ಈ ಬಗ್ಗೆ ಸ್ಥಳೀಯರು ಸೇರಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು. ಆಗಿನ ಕಾರ್ಕಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಜನಾರ್ದನ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಾಸಿಕ್ಯೂಷನ್ ಪರವಾಗಿ 18 ಸಾಕ್ಷಿಗಳ ಪೈಕಿ 9 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ನೊಂದ ಬಾಲಕಿಯ ಸಾಕ್ಷ್ಯ ಮತ್ತು ಸಾಂಧರ್ಬಿಕ ಸಾಕ್ಷಿಯನ್ನು ಪರಿಗಣಿಸಿ ಆರೋಪಿಗೆ ಕಲಂ 294ರಡಿ ಮೂರು ತಿಂಗಳು ಸಜೆ, 341ರಡಿ ಒಂದು ತಿಂಗಳು ಸಜೆ, 354ರಡಿ ಒಂದು ವರ್ಷ ಸಜೆ ಮತ್ತು 500ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳ ಸಾದಾ ಸಜೆ, 354(ಡಿ)ರಡಿ ಮೂರು ವರ್ಷ ಜೈಲುಶಿಕ್ಷೆ ಮತ್ತು 500ರೂ. ದಂಡ, ತಪ್ಪಿದರೆ ಒಂದು ತಿಂಗಳು ಸಜೆ, 8 ಪೊಕ್ಸೊ ಕಾಯಿದೆಯಡಿ ಮೂರು ವರ್ಷ ಜೈಲುಶಿಕ್ಷೆ ಮತ್ತು 1000ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಎರಡು ತಿಂಗಳ ಸಾದಾ ಸಜೆ ವಿಧಿ ಆದೇಶ ನೀಡಿದರು.
ದಂಡದ ಒಟ್ಟು ಮೊತ್ತದಲ್ಲಿ ಒಂದು ಸಾವಿರ ರೂ.ವನ್ನು ನೊಂದ ಬಾಲಕಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.







