ನಂಜನಗೂಡು ಕ್ಷೇತ್ರದಿಂದ ಧ್ರುವನಾರಾಯಣ ಪುತ್ರ ದರ್ಶನ್ ಗೆ ಕಾಂಗ್ರೆಸ್ ಟಿಕೆಟ್ ಕೊಡುವಂತೆ ಎಚ್.ವಿಶ್ವನಾಥ್ ಆಗ್ರಹ

ಮೈಸೂರು,ಮಾ.14: ಮಾಜಿ ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಮಗನ ರೂಪದಲ್ಲಿ ಧ್ರುವನಾರಾಯಣ ಅವರನ್ನು ಕಾಣುವ ಶಕ್ತಿಯನ್ನು ಕಾಂಗ್ರೆಸ್ ಪಕ್ಷ ಕಟ್ಟಿಕೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್.ಧ್ರುವನಾರಾಯಣ ಸರಳ ಸಜ್ಜನಿಕೆಯ ಕ್ರಿಯಾಶೀಲ ರಾಜಕಾರಣಿ. ಎರಡು ಬಾರಿ ಸಂಸದರಾಗಿ ಉದ್ಯೋಗ, ಶಿಕ್ಷಣ ನೀಡುವ ಮೂಲಕ ಚಾಮರಾಜನಗರ ಜಿಲ್ಲೆಗಳಲ್ಲಿ ಟ್ರೈಬಲ್ ಶಾಲೆಗಳು ಸೇರಿದಂತೆ ಹಲವು ಜನಪರ ಯೋಜನೆಗಳನ್ನು ನೀಡಿದ್ದಾರೆ. ಇವರ ಅಕಾಲಿಕ ಮರಣ ಅವರು ಅಭಿಮಾನಿಗಳು ಕಾರ್ಯಕರ್ತರು ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕರಿಗೆ ನೋವುಂಟು ಮಾಡಿದೆ.
ಆರ್.ಧ್ರುವನಾರಾಯಣ 2019 ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಚಲಬಿಡದ ವಿಕ್ರಮನಂತೆ ಕೆಲಸ ಮಾಡುತ್ತಿದ್ದರು. ಜನ ಅವರ ಮೇಲೆ ಅಪಾರ ಪ್ರೀತಿ ವಿಶ್ವಾವಿಟ್ಟಿದ್ದರು ಎಂಬುದಕ್ಕೆ ಸಾಕ್ಷಿ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಜನಸಾಗರ ಎಂದು ಹೇಳಿದರು.
''ಧ್ರುವನಾರಯಣ ಅವರ ಅಭಿಮಾನಿಗಳು ಕಾರ್ಯಕರ್ತರ ಒತ್ತಾಸೆಯಂತೆ ಅವರ ಪುತ್ರ ದರ್ಶನ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಧ್ರುವನಾರಾಯಣ ಅವರಿಗೆ ಸಜ್ಜನಿಕೆಯ ವಿದಾಯ ಹೇಳಿದ ಹಾಗೆ ಆಗುತ್ತದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಅವರ ಪತ್ನಿಗೂ ಸಂತೋಷವಾಗಲಿದೆ. ಇದರಿಂದ ಕಾಂಗ್ರೆಸ್ ಪಕ್ಷ, ನಾಯಕರುಗಳು , ಜನರು ಕೈಬಿಡಲಿಲ್ಲ ಎಂಬ ಸಾರ್ಥಕ ಭಾವ ಮೂಡುತ್ತದೆ'' ಎಂದು ಹೇಳಿದರು.
'ಚಾಮರಾಜನಗರ ಮತ್ತು ನಂಜನಗೂಡು ಜನರ ಒತ್ತಾಯದ ಮೇರೆಗೆ ಕಾಂಗ್ರೆಸ್ ನಾಯಕರುಗಳಾದ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಮಾನ್ಯ ಮಾಡಬೇಕು, ಇಂದು ರಾಜಕಾರಣಕ್ಕೆ ರಿಯಲ್ ಎಸ್ಟೇಟ್ ನವರು ರೌಡಿಗಳು ಬರುತ್ತಿರುವ ಸಂದರ್ಭದಲ್ಲಿ ಆರ್.ಧ್ರುವನಾರಾಯಣ ಅವರ ಪುತ್ರ ವಕೀಲರಾಗಿದ್ದಾರೆ. ಅಂತಹ ವ್ಯಕ್ತಿಗಳನ್ನು ರಾಜಕಾರಣಕ್ಕೆ ಕರೆತರುವ ಮೂಲಕ ಮಾದರಿಯಾಗಬೇಕು'' ಎಂದು ಹೇಳಿದರು.







