ಪಚ್ಚನಾಡಿಯಲ್ಲಿ ಮತ್ತೆ ಬೆಂಕಿ ಅವಘಡ

ಮಂಗಳೂರು: ನಗರ ಹೊರವಲಯದ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಶಮನಕ್ಕೆ ಅಗ್ನಿಶಾಮಕ ವಾಹನ, ಹಿಟಾಚಿಗಳ ಮೂಲಕ ಕಾರ್ಯಾಚರಣೆ ಮುಂದುವರಿಸಲಾಗಿದೆ.
ನಗರದ ಕದ್ರಿ-ಪಾಂಡೇಶ್ವರ ಠಾಣೆಯ ಮೂರು ಅಗ್ನಿ ಶಾಮಕ ವಾಹನಗಳ ಜತೆಗೆ ಕೆಐಒಸಿಎಲ್, ಎಸ್‌ಇಝೆಡ್, ಎನ್‌ಎಂಪಿಎ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನಗಳು ಕೂಡ ಕಾರ್ಯಾಚರಣೆ ನಡೆಸಿವೆ.
ತ್ಯಾಜ್ಯ ರಾಶಿಯಿಂದ ಕಾಣಿಸಿಕೊಳ್ಳುವ ಹೊಗೆ ಗಾಳಿಗೆ ಲ್ಯಾಂಡ್‌ಲಿಂಕ್ಸ್, ಯೆಯ್ಯಾಡಿ, ಬೋಂದೆಲ್, ಕಾವೂರು ಮತ್ತಿತರ ಕಡೆಗಳ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಹಿಟಾಚಿಗಳ ಮೂಲಕ ತ್ಯಾಜ್ಯವನ್ನು ಬುಡಮೇಲು ಮಾಡುವ ಕೆಲಸ ಭರದಿಂದ ನಡೆಯುತ್ತಿದೆ. ಟಿಪ್ಪರ್‌ಗಳಲ್ಲಿ ಕೂಡ ನಿರಂತರವಾಗಿ ಮಣ್ಣು ತಂದು ಸುರಿಯಲಾಗುತ್ತಿದೆ. ಬೆಂಕಿ ಸುತ್ತಮುತ್ತ ವ್ಯಾಪಿಸದಂತೆ ತ್ಯಾಜ್ಯವನ್ನು ಪ್ರತ್ಯೇಕಿಸುವ ಕೆಲಸವೂ ಹಿಟಾಚಿಗಳ ಮೂಲಕ ನಡೆಸಲಾಗುತ್ತಿದೆ.
ಸ್ಥಳಕ್ಕೆ ಮೇಯರ್ ಜಯಾನಂದ ಅಂಚನ್, ಆಯುಕ್ತ ಚನ್ನಬಸಪ್ಪ ಕೆ., ವಲಯ ಆಯುಕ್ತ ಶಬರೀನಾಥ್ ರೈ, ಪರಿಸರ ವಿಭಾಗದ ಇಂಜಿನಿಯರ್ ದೀಪ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.